ಮಾ 3 ರಿಂದ ಕಾಂಗ್ರೆಸ್‌ನ ಜನಧ್ವನಿ ಯಾತ್ರೆ

ಬೆಂಗಳೂರು, ಮಾ. 02: ಕಾಂಗ್ರೆಸ್ ಪಕ್ಷವನ್ನು ಮತ್ತೆ  ಅಧಿಕಾರಕ್ಕೆ ತರಲು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾರ್ಚ್ 3ರಿಂದ ಜನಧ್ವನಿ ಯಾತ್ರೆ ಆರಂಭಿಸಲು ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಿರುವ ರಾಜ್ಯ ಕಾಂಗ್ರೆಸ್‌ನ ‘ಜನಧ್ವನಿ’ ಯಾತ್ರೆ ನಾಳೆಯಿಂದ ಆರಂಭಗೊಳ್ಳಲಿದೆ.

ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೋಲಾರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕುರುಡುಮಲೆಯ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ, ಯಾತ್ರೆ ನಿರ್ವಿಘ್ನವಾಗಿ ನಡೆಯುವಂತೆ ಬೇಡಿಕೊಂಡಿದ್ದಾರೆ. ದೇವಾಲಯದಲ್ಲಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1999 ರಲ್ಲಿ ಎಸ್.ಎಂ. ಕೃಷ್ಣಾ ಅವರು ಕುರುಡುಮಲೆಯಿಂದ ಪಾಂಚಜನ್ಯ ಯಾತ್ರೆ ಆರಂಭಿಸಿ, ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಅದರಂತೆ ನಾನು ಕೂಡಾ ಪಾಂಚಜನ್ಯ ಮೊಳಗಿಸಲಿದ್ದೇನೆ. ಜನಧ್ವನಿ ಯಾತ್ರೆಯ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯ, ಜನವಿರೋಧಿ ನೀತಿಗಳು, ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ಈ ಹೋರಾಟ ರೂಪಿಸಿದ್ದು, ಜನರ ಬಳಿಗೆ ಕಾಂಗ್ರೆಸ್ ಎಂಬ ಘೋಷವಾಕ್ಯದಡಿ ಜನಧ್ವನಿ ಯಾತ್ರೆ ನಡೆಸಲಾಗುವುದು. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖ ಮುಖಂಡರುಗಳು ರಾಜ್ಯದಾದ್ಯಂತ ಬಸ್‌ನಲ್ಲಿ ಈ ಜನಧ್ವನಿ ಯಾತ್ರೆ ನಡೆಸುವರು ಎಂದು ತಿಳಿಸಿದ್ದಾರೆ.

ಇದೇ ಮಾರ್ಚ್ 3 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಈ ಯಾತ್ರೆ ಚಾಲನೆಯಾಗಲಿದ್ದು, ಬೆಂಗಳೂರಿನಿಂದ ಮಾರ್ಚ್ 3 ರಂದು ಕಾಂಗ್ರೆಸ್‌ನ ಎಲ್ಲ ಪ್ರಮುಖ ಮುಖಂಡರು ಬಸ್‌ನಲ್ಲಿ ದೇವನಹಳ್ಳಿಗೆ ತೆರಳಿ ಅಲ್ಲಿ ಪಾದಯಾತ್ರೆ ನಡೆಸಿ, ನಂತರ ಕಾಂಗ್ರೆಸ್ ಸಮಾವೇಶದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವರು. ಇದಾದ ನಂತರ ಮಾರ್ಚ್ 3 ರಂದು ಮಧ್ಯಾಹ್ನ 3 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಜನಧ್ವನಿ ಯಾತ್ರೆ ನಡೆಯಲಿದೆ. ಈ ಜನಧ್ವನಿ ಯಾತ್ರೆ ನಿರಂತರವಾಗಿ ನಡೆಯದಿದ್ದರೂ ಎಲ್ಲಾ ಜಿಲ್ಲೆಗಳಲ್ಲೂ ನಾಯಕರುಗಳ ಸಮಯ ಲಭ್ಯತೆಯನ್ನು ನೋಡಿಕೊಂಡು ಜನಧ್ವನಿ ಯಾತ್ರೆ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

Exit mobile version