ಕೊರೊನಾ: ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್ ಘೋಷಿಸಿ; ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಿಎಂಗೆ ಮನವಿ ಸಲ್ಲಿಕೆ

ಬೆಂಗಳೂರು, ಮೇ. 26: ಖಾಸಗಿ ಶಾಲೆಗಳ ಶಿಕ್ಷಕರಿಗೆ ಪ್ಯಾಕೇಜ್‌ ಘೋಷಿಸಿ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಶಿಕ್ಷಕರ ಪದವೀಧರ ಕ್ಷೇತ್ರಗಳ ಶಾಸಕರ ನಿಯೋಗದೊಂದಿಗೆ ಸಚಿವ ಎಸ್.ಸುರೇಶ್‌ ಕುಮಾರ್‌‌ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಕೇತರರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಈ ಸಮುದಾಯಕ್ಕೆ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಕೋರಿದ್ದಾರೆ.

ಖಾಸಗಿ ಶಾಲೆಗಳ ಶಿಕ್ಷಕರ ಸ್ಥಿತಿ ಶೋಚನೀಯವಾಗಿದ್ದು, ದೈನಂದಿನ ಜೀವನ ನಿರ್ವಹಣೆಯೂ ದುಸ್ತರವಾಗಿದೆ. ಜೀವನ ನಡೆಸಲು ಈ ಸಮುದಾಯದ ಹಲವಾರು‌ ಜನ ಹಣ್ಣು-ತರಕಾರಿ ಮಾರುತ್ತಿದ್ದಾರೆ. ಕೂಲಿ ಕೆಲಸ‌ ಮಾಡಿದ್ದಾರೆ. ನಮ್ಮ ಮಕ್ಕಳ ಹಿತಕಾಯುವ ಸಮುದಾಯವನ್ನು ನಾವು ಘನತೆಯಿಂದ ನಡೆಸಿಕೊಳ್ಳುವುದು ಕರ್ತವ್ಯವಾಗಿದ್ದು, ಸರ್ಕಾರದ ಆರ್ಥಿಕ ಪ್ಯಾಕೇಜ್ ಈ ಸಮುದಾಯಕ್ಕೆ ಆತ್ಮ ವಿಶ್ವಾಸ ತುಂಬಲು ಸಹಕಾರಿಯಾಗಲಿದೆ ಎಂದು ಉಲ್ಲೇಖಿಸಿದ್ದಾರೆ.

Exit mobile version