ಕೊರೊನಾ ಎಫೆಕ್ಟ್: 1 ರಿಂದ 9ನೇ ತರಗತಿಯ ಎಲ್ಲಾ ಪರೀಕ್ಷೆಗಳು ರದ್ದು; ಈ ತರಗತಿಗಳ ವಿದ್ಯಾರ್ಥಿಗಳು ಪಾಸ್

ಬೆಂಗಳೂರು, ಏ. 20: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ 1 ರಿಂದ 9 ನೇ ತರಗತಿಯವರೆಗಿನ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, ಈ ತರಗತಿಗಳ ವಿದ್ಯಾರ್ಥಿಗಳನ್ನು ಪಾಸ್‌ ಮಾಡುವಂತೆ ರಾಜ್ಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 1ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈವರೆಗೆ ಆನ್​ಲೈನ್ ಮತ್ತು ವಿದ್ಯಾಗಮ ಯೋಜನೆ ಅಡಿ ನಡೆದ ಪಾಠಗಳಲ್ಲಿ ಅವರು ತೋರಿದ ಪ್ರಗತಿ ಇತ್ಯಾದಿ ಅಂಶಗಳೊಂದಿಗೆ ಚೈಲ್ಡ್ ಪ್ರೊಫೈಲ್ (ಕೃತಿ ಸಂಪುಟ) ತಯಾರಿಸಿ. ಸಿಸಿಇ ನಿಯಮಗಳಂತೆ ಇತರೆ ಲಭ್ಯ ದಾಖಲೆಗಳನ್ನು ಅವಲೋಕಿಸಿ ಈವರೆಗೆ ಪೂರೈಸಿದ ಪಠ್ಯವಸ್ತು, ಸಾಮರ್ಥ್ಯಗಳ ಸಾಧನೆ, ಕೊರತೆಗಳನ್ನು ವಿಶ್ಲೇಷಿಸಿ ಪ್ರಗತಿ ಪತ್ರದಲ್ಲಿ ದಾಖಲಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಬೇಕು.

ಈ ಪ್ರಕ್ರಿಯೆಯನ್ನು ಏಪ್ರಿಲ್ 30ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಆದರೆ, ನಿಗದಿಯಂತೆ 10ನೇ ತರಗತಿ ಪರೀಕ್ಷೆ ಜೂನ್ 21ರಿಂದ ಪ್ರಾರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಇಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

Exit mobile version