ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವ 16 ತಿಂಗಳ ಬಳಿಕ ಫ್ರೀಜರ್‌ನಿಂದ ಹೊರತೆಗೆದ ಆಸ್ಪತ್ರೆ ಸಿಬ್ಬಂದಿ.

ಬೆಂಗಳೂರು ನ 30 ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು 16 ತಿಂಗಳ ಬಳಿಕ ಆಸ್ಪತ್ರೆ ಫ್ರೀಜ್‌ನಿಂದ ಹೊರತೆಗೆದ ಘಟನೆ ರಾಜಾಜಿನಗರದ ಇಎಸ್‌ಐ ಆಸ್ಪತರೆಯಲ್ಲಿ ನಡೆದಿದೆ.  ಮುನಿರಾಜು (67) ಅವರು 2020ರ ಜುಲೈ 2ರಂದು ಕೊರೊನಾ ಸೋಂಕಿನಿಂದ(Covid-19) ಬೆಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆದರೆ ರಾಜಾಜಿನಗರದಲ್ಲಿರುವ ಇಎಸ್ಐ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿಬಿಟ್ಟಿದ್ದಾರೆ.

ಮೃತ ಮುನಿರಾಜುರವರ ಅಂತ್ಯಸಂಸ್ಕಾರ ಮಾಡಬೇಕೆಂದು ಅವರ ಕುಟುಂಬದವರು ಆಸ್ಪತ್ರೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆಗೆ ಒಪ್ಪಿಗೆ ನೀಡಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡದೆ ಬೇಜವಾಬ್ದಾರಿತನ ತೋರಿದ್ದಾರೆ. ಇದೀಗ ಆಸ್ಪತ್ರೆಯ ಫ್ರೀಜರ್‌ನಲ್ಲಿಯೇ ಇದ್ದ ಶವಗಳನ್ನು ಬರೋಬ್ಬರಿ 16 ತಿಂಗಳ ಬಳಿಕ ಹೊರಕ್ಕೆ ತೆಗೆದಿದ್ದಾರೆ.

ಚಾಮರಾಜಪೇಟೆಯ ನಿವಾಸಿ ದುರ್ಗಾ(40) ಮತ್ತು ಕೆ.ಪಿ.ಅಗ್ರಹಾರದ ನಿವಾಸಿ ಮುನಿರಾಜು 2020ರ ಜುಲೈ ತಿಂಗಳಿನಲ್ಲಿಯೇ ಕೊರೊನಾದಿಂದ ಸಾವನ್ನಪ್ಪಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಈ ಶವಗಳ ಅಂತ್ಯಸಂಸ್ಕಾರ ನೆರವೇರಿಸದೆ ನಿರ್ಲಕ್ಷ್ಯವಹಿಸಿದ್ದಾರೆ. ಬರೋಬ್ಬರಿ 16 ತಿಂಗಳುಗಳ ಕಾಲ ಶವಗಳು ರಾಜಾಜಿನಗರ ಇಎಸ್‌ಐ ಆಸ್ಪತ್ರೆ(ESI Hospital) ಶವಾಗಾರದಲ್ಲಿ ಬಿದ್ದಿದ್ದರೂ ಯಾರೂ ಅವುಗಳ ಬಗ್ಗೆ ಗಮನಹರಿಸಿಲ್ಲ. ಆಸ್ಪತ್ರೆಯ ಫ್ರೀಜರ್‌ನಲ್ಲಿಯೇ ಅನಾಥವಾಗಿ ಬಿದ್ದಿದ್ದ ಶವಗಳನ್ನು ಸಿಬ್ಬಂದಿ ಈಗ ಹೊರತೆಗೆದಿದ್ದಾರೆ.

ಆಸ್ಪತ್ರೆಯಲ್ಲಿಯೇ ಹಲವಾರು ದಿನಗಳಿಂದ ಬಿದ್ದಿದ್ದ ಈ ಮೃತ ದೇಹಗಳ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ. ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದೇ ಅವರ ಕುಟುಂಬಸ್ಥರು ನಂಬಿಕೊಂಡಿದ್ದರು. ಧಾರ್ಮಿಕ ಪದ್ಧತಿಗಳ ಪ್ರಕಾರ ಶ್ರಾದ್ಧ ವಿಧಿವಿಧಾನಗಳನ್ನು ಕೂಡ ನೆರವೇರಿಸಿದ್ದರು. ಆದರೆ ಇಬ್ಬರ ಮೃತದೇಹಗಳು ಆಸ್ಪತ್ರೆಯ ಶವಾಗಾರದಲ್ಲಿಯೇ ಕೊಳೆಯುತ್ತಿದ್ದವು. ಇದು ಕಳೆದ ಶನಿವಾರ ಬಹಿರಂಗವಾಗಿದ್ದು, ಬಳಿಕ ಆಸ್ಪತ್ರೆಯ ಇಡೀ ಆಡಳಿತ ವಿಭಾಗದಲ್ಲಿ ಸಂಚಲನ ಉಂಟಾಗಿತ್ತು. ಮೃತದೇಹಗಳು ಯಾವ ಸಂದರ್ಭಗಳಲ್ಲಿ ಪತ್ತೆಯಾಗಿವೆ ಅಥವಾ ಅವುಗಳನ್ನು ಹೆಗೆ ಪತ್ತೆ ಮಾಡಲಾಯಿತು ಎಂಬುದರ ಕುರಿತು ಆಸ್ಪತ್ರೆಯಿಂದ ಯಾವುದೇ ಸ್ಪಷ್ಟೀಕರಣವಿಲ್ಲ. ಯಾವುದೇ ಆಸ್ಪತ್ರೆಯ ಅಧಿಕಾರಿಗಳು ಈ ವಿಷಯದ ಬಗ್ಗೆ ಮಾತನಾಡಲು ಸಿದ್ಧವಾಗಿಲ್ಲ.

Exit mobile version