ಕೊರೊನಾ ಎರಡನೇ ಅಲೆಯ ಅಬ್ಬರ: ದೇಶದಲ್ಲಿ 513 ವೈದ್ಯರು ಬಲಿ

ಹೊಸದಿಲ್ಲಿ, ಮೇ. 26: ದೇಶದೆಲ್ಲೆಡೆ ದೊಡ್ಡ ಆತಂಕ ಸೃಷ್ಟಿಸಿರುವ ಕೊರೊನಾ ಎರಡನೇ ಅಲೆ ಭಾರತದಲ್ಲಿ ಪ್ರಬಲವಾಗಿ ಬೀಸುತ್ತಿದ್ದು, ಈ ಮಹಾಮಾರಿಯ ಭೀಕರತೆ ಸಂಪೂರ್ಣ ಭಾರತವನ್ನು ಆವರಿಸಿದೆ. ಇದರ ಪರಿಣಾಮ ಕೊರೊನಾ ಅಬ್ಬರಕ್ಕೆ ಕೇವಲ 2 ತಿಂಗಳಲ್ಲಿ 500ಕ್ಕೂ ಹೆಚ್ಚು ವೈದ್ಯರು ಬಲಿಯಾಗಿದ್ದಾರೆ.

ದೇಶದಲ್ಲಿ ಫೆಬ್ರವರಿ ಅಂತ್ಯಕ್ಕೆ ಆರಂಭಗೊಂಡ ಎರಡನೇ ಅಲೆ ಅಬ್ಬರಕ್ಕೆ ಈವರೆಗೂ 513 ಮಂದಿ ವೈದ್ಯರು ಮೃತಪಟ್ಟಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 103 ವೈದ್ಯರು ಮಹಾಮಾರಿಯ ಹೊಡೆತಕ್ಕೆ ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ(IMA) ಮಾಹಿತಿ ಬಿಡುಗಡೆ ಮಾಡಿದೆ.

ಉಳಿದಂತೆ ಕೊರೊನಾ 2ನೇ ಅಲೆಯ ದಾಳಿಗೆ ಬಿಹಾರದಲ್ಲಿ 96 ಮತ್ತು ಉತ್ತರ ಪ್ರದೇಶದಲ್ಲಿ 41, ರಾಜಸ್ಥಾನದಲ್ಲಿ 39, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಜಾರ್ಖಂಡ್ ನಲ್ಲಿ 29 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಐಎಂಎ ಮಾಹಿತಿ ಅನ್ವಯ 2020ರಲ್ಲಿ ಕೊರೊನಾ ಮೊದಲ ಅಲೆಯ ಆರ್ಭಟಕ್ಕೆ ದೇಶದಲ್ಲಿ 748 ವೈದ್ಯರು ಮೃತಪಟ್ಟಿದ್ದಾರೆ.

ಅಲ್ಲದೇ, ದೇಶದಲ್ಲಿ ಕೊರೊನಾ ಸೋಂಕಿನಿಂದ‌ ಈವರೆಗೂ ಸಾವಿರಾರು ವೈದ್ಯರು ಬಲಿಯಾಗಿದ್ದು, ಐಎಂಎಯಲ್ಲಿ ಸದಸ್ಯರಾಗಿರುವ 3.5 ಲಕ್ಷ ವೈದ್ಯರಲ್ಲಿ ಈವರೆಗೆ ಕೊರೊನಾ ಸೋಂಕಿಗೆ ಬಲಿಯಾದವರ ಬಗ್ಗೆ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ದೇಶದೆಲ್ಲೆಡೆ ಒಟ್ಟು 12 ಲಕ್ಷಕ್ಕೂ ಅಧಿಕ ವೈದ್ಯರಿದ್ದಾರೆ ಎಂದು ಐಎಂಎ ಮಾಹಿತಿ ನೀಡಿದೆ.

Exit mobile version