ಕೊರೋನಾ: ಪೆರೋಲ್ ಪಡೆದವರ ಅವಧಿಯನ್ನು ವಿಸ್ತರಿಸುವಂತೆ ಸುಪ್ರೀಂಕೋರ್ಟ್ ಆದೇಶ

ನವದೆಹಲಿ, ಮೇ. 08: ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ಕೈದಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಅನಿವಾರ್ಯ ಎಂಬ ಮಹತ್ವದ ಆದೇಶವನ್ನು ಇಂದು ಸುಪ್ರೀಂಕೋರ್ಟ್ ಹೊರಡಿಸಿದೆ. ಸಾಮಾನ್ಯವಾಗಿ ಕಾರಾಗೃಹಗಳಲ್ಲಿ ಕೈದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಅಲ್ಲಿ ಒಬ್ಬನಿಗೆ ಬಂದರೆ ಖಂಡಿತವಾಗಿಯೂ ವೇಗವಾಗಿ ಪಸರಿಸುತ್ತದೆ ಎಂಬುದನ್ನು ಗಮನಿಸಿರುವ ಸುಪ್ರೀಂಕೋರ್ಟ್, ಏಳು ವರ್ಷಕ್ಕಿಂತ ಕಡಿಮೆ ಜೈಲು ವಾಸ ಇರುವ ಅಪರಾಧ ಮಾಡಿದ, ಗಂಭೀರ ಸ್ವರೂಪವಲ್ಲದ ಕ್ರೈಂ ಮಾಡಿದ ಆರೋಪಿಗಳನ್ನು ಅನಗತ್ಯವಾಗಿ ಪೊಲೀಸರು ಬಂಧಿಸಬಾರದು. ಹಾಗೇ ಈಗಾಗಲೇ ಕಾರಾಗೃಹದಲ್ಲಿರುವ ಕೈದಿಗಳ ಆರೋಗ್ಯದಲ್ಲಿ ಏರುಪೇರಾದರೆ ಗಮನಿಸಿ, ಅಗತ್ಯ ವೈದ್ಯಕೀಯ ಸಲಹೆ ನೀಡಬೇಕು ಎಂದು ಸೂಚಿಸಿದೆ.

ಇನ್ನು ಜೈಲಿನಲ್ಲಿ ಕೈದಿಗಳ ದಟ್ಟಣೆ ಕಡಿಮೆ ಮಾಡಲು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಉನ್ನತ ಸಮಿತಿಯೊಂದನ್ನು ರಚಿಸಬೇಕು. ಕಾರಾಗೃಹಗಳಲ್ಲಿ ಇರುವ ಬಿಡುಗಡೆಗೆ ಯೋಗ್ಯರಾದ ಕೈದಿಗಳನ್ನು, ಆರೋಗ್ಯ ಸಮಸ್ಯೆ ಇರುವವರನ್ನು ಆದಷ್ಟು ಬೇಗ ಬಿಡುಗಡೆ ಮಾಡಿಸುವ ಕೆಲಸವನ್ನು ಈ ಸಮಿತಿ ಮಾಡಬೇಕು. ಹಾಗೇ ಯಾರಿಗೆ ಜಾಮೀನು ನೀಡಬಹುದು? ಪೆರೋಲ್ ಆಧಾರದಲ್ಲಿ ಯಾರನ್ನು ಕಳಿಸಬಹುದು ಎಂಬಿತ್ಯಾಗಿ ಅಂಶಗಳನ್ನು ಸಮಿತಿಯ ನೇತೃತ್ವದಲ್ಲಿ ನಿರ್ಧರಿಸಬೇಕು. ಆದರೆ ಅದಕ್ಕೂ ಮೊದಲು ಸಮಿತಿ ಸೂಕ್ಷ್ಮವಾಗಿ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಹಾಗೇ, ಈಗಾಗಲೇ ಪೆರೋಲದ ಪಡೆದು ಹೊರಗೆ ಇರುವ ಕೈದಿಗಳಿಗೆ ಅದರ ಅವಧಿಯನ್ನು ವಿಸ್ತರಿಸುವಂತೆಯೂ ತಿಳಿಸಿದೆ.

ಇನ್ನು ಕೆಲವು ಕೈದಿಗಳ ಹಿನ್ನೆಲೆಯನ್ನು ಅವಲೋಕಿಸಿದಾಗ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಂಥವರನ್ನು ಕಾರಾಗೃಹದಲ್ಲೇ ಇಟ್ಟುಕೊಳ್ಳಬೇಕು. ಆದರೆ ಅವರ ಬಗ್ಗೆಯೂ ಕಾಳಜಿ ವಹಿಸಬೇಕು. ಆರೋಗ್ಯ ಸೇವೆ ಸರಿಯಾಗಿ ಒದಗಿಸಬೇಕು ಎಂದು ಹೇಳಿರುವ ಸುಪ್ರೀಂಕೋರ್ಟ್​, ಬರೀ ಕೈದಿಗಳನ್ನಷ್ಟೇ ಅಲ್ಲ, ಜೈಲು ಸಿಬ್ಬಂದಿಯನ್ನೂ ಆಗಾಗ ಪರಿಶೀಲನೆ ಮಾಡಬೇಕು. ಸೋಂಕು ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಕಾರಾಗೃಹಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂಬಿತ್ಯಾದಿ ಅಂಶಗಳನ್ನು ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.

Exit mobile version