ಕೊರೋನಾ ದುಃಸ್ಥಿತಿ: ಸುಮನಹಳ್ಳಿ ಚಿತಾಗಾರದಲ್ಲಿ ಕೆಟ್ಟು ನಿಂತ ದಹನ ಯಂತ್ರ

ಬೆಂಗಳೂರು, ಏ. 20: ಕರ್ನಾಟಕದ ಪಾಲಿಗೆ ಕೊರೊನಾ ಎರಡನೇ ಅಲೆ ಭೀಕರವಾಗಿ ಪರಿಣಮಿಸಿದ್ದು ಪರಿಸ್ಥಿತಿ ದಿನೇದಿನೇ ಗಂಭೀರ ಹಂತದತ್ತ ಸಾಗುತ್ತಿದೆ. ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಆಸ್ಪತ್ರೆಯಲ್ಲಿ ಪರಗಾಟ ಶುರುವಾಗಿದ್ದರೆ ಇನ್ನೊಂದೆಡೆ ಮೃತಪಟ್ಟವರ ಶವಸಂಸ್ಕಾರಕ್ಕೆ ಸಶಾನದಲ್ಲಿ ಒದ್ದಾಡಬೇಕಾದ ದುಸ್ಥಿತಿ ಉದ್ಭವವಾಗಿದೆ. ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಸುಮನಹಳ್ಳಿ ಚಿತಾಗಾರದಲ್ಲಿ ಪ್ರತಿನಿತ್ಯ ಶವಗಳ ಸಂಖ್ಯೆ ಹೆಚ್ಚುತ್ತಿದ್ದು ಇದರ ನಡುವೆಯೇ ಶವ ಸುಡುವ ದಹನ ಯಂತ್ರ ಕೆಟ್ಟು ನಿಂತಿರುವುದು ಸಂಕಷ್ಟವನ್ನು ಉಂಟುಮಾಡಿದೆ.

ಸುಮನಹಳ್ಳಿಯಲ್ಲಿರುವ ಚಿತಾಗಾರ 24/7 ಮಾದರಿಯಲ್ಲಿ ಒಂದೇ ಸಮನೆ ಕಾರ್ಯನಿರತವಾಗಿದ್ದ ಇಲ್ಲಿನ ಹೆಣ ಸುಡುವ ಯಂತ್ರಗಳ ಪೈಕಿ ಒಂದು ಈಗ ಕೆಟ್ಟು ನಿಂತಿದೆ. ಇಲ್ಲಿರುವ 2 ದಹನ ಯಂತ್ರಗಳ ಪೈಕಿ 1 ಯಂತ್ರ ಕೆಟ್ಟು ಹೋಗಿದ್ದು ಕೇವಲ ಒಂದೇ ಒಂದು ಯಂತ್ರದ ಮೂಲಕ ಶವಸಂಸ್ಕಾರ ಮಾಡಬೇಕಾಗಿದೆ. ಕಳೆದೊಂದು ವಾರದಿಂದಲೂ ಚಿತಾಗಾರದಲ್ಲಿ ಬಿಡುವಿಲ್ಲದೇ ಶವಗಳ ದಹನ ಕಾರ್ಯ ನಡೆಯುತ್ತಿದ್ದು, ಇಂದು ಸಹ ಒಟ್ಟು 7 ಆತಂಕ ಆ್ಯಂಬುಲೆನ್ಸ್‌ಗಳಲ್ಲಿ ಕೊವಿಡ್‌ನಿಂದ ಮೃತಪಟ್ಟವರ ಶವಗಳನ್ನು ತರಲಾಗಿದ್ದು, ದಹನ ಯಂತ್ರ ಹಾಳಾಗಿರುವ ಕಾರಣ ಅಂತ್ಯಸಂಸ್ಕಾರಕ್ಕೆ ಸಮಸ್ಯೆ ಉಂಟಾಗಿದೆ.

ಹೀಗಾಗಿ ದಹನ ಯಂತ್ರಗಳ ಸಮಸ್ಯೆಯಿಂದಾಗಿ ಬೇಸತ್ತ ಮೃತರ ಕುಟುಂಬಸ್ಥರು ಕಾದು ಕಾದು ಬೇಸತ್ತು ಮೃತದೇಹಗಳನ್ನು ಬೇರೆಡೆಗೆ ಕೊಂಡೊಯ್ಯಲು ಆರಂಭಿಸಿದ್ದಾರೆ. ಬೆಳಗ್ಗೆಯಿಂದ ಮೂರು ಮೃತದೇಹಗಳನ್ನು ಸುಮನಹಳ್ಳಿ ಚಿತಾಗಾರಕ್ಕೆ ತಂದು ಸುಡಲಾಗದೇ ವಾಪಾಸು ಕೊಂಡೊಯ್ಯಲಾಗಿದೆ. ಸುಮ್ಮನಹಳ್ಳಿಗೆ ತಂದ ಶವಗಳನ್ನು ಪೀಣ್ಯ ಚಿತಾಗಾರಕ್ಕೆ ಕೊಂಡೊಯ್ಯಲಾಗುತ್ತಿದ್ದು ಅಲ್ಲಿಯೂ ಮೃತದೇಹಗಳ ಸಂಖ್ಯೆ ಹೆಚ್ಚಿರುವುದರಿಂದ ಸರತಿಯಲ್ಲಿ ನಿಲ್ಲಬೇಕಾಗಿ ಬಂದಿದೆ. ಈ ಅವ್ಯವಸ್ಥೆಗಳ ಕಾರಣದಿಂದಾಗಿ ಮೃತರ ಕುಟುಂಬಸ್ಥರು ಅಕ್ಷರಶಃ ಹೈರಾಣಾಗಿ ಹೋಗಿದ್ದಾರೆ.

ಇನ್ನೊಂದೆಡೆ ಅಂತ್ಯಕ್ರಿಯೆ ನಡೆಸುವ ಸ್ಥಳದ ಆವರಣದಲ್ಲಿಯೇ ಪಿಪಿಇ ಕಿಟ್ ಮಾಸ್ಕ್ ಗೌಸ್, ಅಂತ್ಯಕ್ರಿಯೆಗೆ ತಂದ ವಸ್ತುಗಳನ್ನು ಎಸೆಯಲಾಗುತ್ತಿದೆ. ಚಿತಾಗಾರಕ್ಕೆ ಶವ ಸುಡಲು ಬಂದವರಿಗೆ ಕೋವಿಡ್‌ ಭಯ ಆರಂಭವಾಗಿದೆ. ಮೃತದೇಹ ನೋಡಲು ಬಂದವರಿಗೆ ಎಲ್ಲಿ ವೈರಾಣು ತಗುಲುತ್ತದೋ ಎಂಬ ಭಯ ಒಂದು ಕಡೆಯಾದರೆ, ಎಲ್ಲೆಂದರಲ್ಲಿ ಗಾಳಿಗೆ ಸಿಕ್ಕು ತೂರಾಡುತ್ತಿರುವ ಪಿಪಿಇ ಕಿಟ್‌ಗಳು ಎಲ್ಲರ ನೆಮ್ಮದಿ ಕೆಡಿಸಿವೆ.

Exit mobile version