ಕೊರೋನಾದಿಂದ ಕಂಗೆಟ್ಟ ಭಾರತಕ್ಕೆ ಹಲವು ದೇಶಗಳ ನೆರವು

ನವದೆಹಲಿ, ಏ. 27: ಆಕ್ಸಿಜನ್​ ಕೊರತೆಯಿಂದ ಸಂಕಷ್ಟದಲ್ಲಿರುವ ಭಾರತಕ್ಕೆ ಸಹಾಯ ಮಾಡಲು ಹಲವು ದೇಶಗಳು ಮುಂದಾಗಿವೆ. ಅಮೆರಿಕ ಈಗಾಗಲೇ 5ಟನ್​ಗಳಷ್ಟು ಆಕ್ಸಿಜನ್ ಸಾಂದ್ರಕ ಮತ್ತಿತರ ವೈದ್ಯಕೀಯ ಉಪಕರಣಗಳನ್ನು ದೆಹಲಿಗೆ ಕಳಿಸಿದೆ. ಹಾಗೇ ಇಂದು ಇಂಗ್ಲೆಂಡ್ (ಯುಕೆ)ನಿಂದ ಮೊದಲ ಬ್ಯಾಚ್​ನ ಆಮ್ಲಜನಕ ಸಾಂದ್ರಕಗಳು ಮತ್ತು ವೆಂಟಿಲೇಟರ್​ಗಳು ಭಾರತವನ್ನು ತಲುಪಿವೆ.

ಅಮೆರಿಕದಿಂದ ಇಂದು ಇನ್ನೊಂದು ಏರ್​ಇಂಡಿಯಾ ವಿಮಾನ ಭಾರತಕ್ಕೆ ಆಮ್ಲಜನಕ ಸಾಂದ್ರಕವನ್ನು ಹೊತ್ತು ತರಲಿದ್ದು, ಇಂಗ್ಲೆಂಡ್​ನಿಂದ ಇನ್ನೊಂದು ಹಂತದ ಆಕ್ಸಿಜನ್ ಮತ್ತು ವೆಂಟಿಲೇಟರ್​​ಗಳ ಸಾಗಣೆ ಈ ವಾರದ ಕೊನೆಯಲ್ಲಿ ಆಗಲಿದೆ. ಯುಕೆಯಿಂದ ಎರಡನೇ ಬ್ಯಾಚ್​ನಲ್ಲಿ 495 ಆಮ್ಲಜನಕ ಸಾಂದ್ರಕಗಳು, 120 ನಾನ್​ ಇನ್​ವೇಸಿವ್ ವೆಂಟಿಲೇಟರ್​ಗಳು ಮತ್ತು 20 ಮ್ಯಾನ್ಯುಯಲ್​ ವೆಂಟಿಲೇಟರ್​ಗಳು ಭಾರತವನ್ನು ತಲುಪಲಿವೆ.

ಭಾರತ ನಮ್ಮ ಪ್ರಮುಖ ಪಾಲುದಾರ ದೇಶವಾಗಿದೆ. ನಾವು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್​.ಜೈಶಂಕರ್​ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಭಾರತದ ಸಹಾಯಕ್ಕೆ ನಾವಿದ್ದೇವೆ ಎಂದು ಯುಕೆ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ತಿಳಿಸಿದ್ದಾರೆ. ಸಂಯುಕ್ತ ಅರಬ್​ ರಾಷ್ಟ್ರ ಕೂಡ ತಾವು ಭಾರತದ ಬೆಂಬಲಕ್ಕೆ ಇದ್ದೇವೆ ಎಂದು ಹೇಳಿದೆ. ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಟ್ವೀಟ್ ಮಾಡಿದ್ದು, ನಮ್ಮ ದೇಶದಲ್ಲಿ ಕೊರೊನಾ ಸಂಕಷ್ಟ ಮಿತಿಮೀರಿದ್ದಾಗ ಭಾರತ ಸಹಾಯಕ್ಕೆ ಬಂದಿದೆ. ನಾವೀಗ ಭಾರತದ ನೆರವಿಗೆ ಧಾವಿಸುತ್ತೇವೆ ಎಂದು ಹೇಳಿದ್ದಾರೆ.

Exit mobile version