ದೇಶದಲ್ಲಿ ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೊರೊನಾ ಲಸಿಕೆ: ಏಮ್ಸ್ ನಿರ್ದೇಶಕ

ಹೊಸದಿಲ್ಲಿ,ಜೂ.23: ದೇಶದಲ್ಲಿ ಮಕ್ಕಳಿಗೆ ಸೆಪ್ಟೆಂಬರ್ ವೇಳೆಗೆ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ‌ ಡಾ. ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.

ಶ್ವಾಸಕೋಶತಜ್ಞ ಹಾಗೂ ಸರ್ಕಾರದ ಕೋವಿಡ್-19 ಕಾರ್ಯಪಡೆ ನಿರ್ಣಾಯಕ ಸದಸ್ಯರಾಗಿರುವ ಅವರು, ಮಕ್ಕಳಿಗೆ ಲಸಿಕೆ ನೀಡುವ 2 ಮತ್ತು 3ನೇ ಹಂತದ ಪ್ರಯೋಗ ಪೂರ್ಣಗೊಳಿಸಿದ ನಂತರ ಮಕ್ಕಳಿಗಾಗಿ ಕೋವಾಕ್ಸಿನ್ ನೀಡುವ ಕುರಿತ ಡೇಟಾ ಸೆಪ್ಟೆಂಬರ್ ವೇಳೆಗೆ ಲಭ್ಯವಾಗಲಿದೆ ಮತ್ತು ಅದೇ ತಿಂಗಳಲ್ಲಿ ಲಸಿಕೆ ನೀಡುವುದಕ್ಕೆ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಫಿಜ಼ರ್ ಹಾಗೂ ಬಯೋಎನ್‌ಟೆಕ್‌ನ ಲಸಿಕೆಗೆ ಭಾರತದಲ್ಲಿ ಹಸಿರು ನಿಶಾನೆ ದೊರೆತರೆ ಅದು ಸಹ ಮಕ್ಕಳಿಗೆ ಉತ್ತಮ ಆಯ್ಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ದೆಹಲಿ ಏಮ್ಸ್ ಈಗಾಗಲೇ ಈ ಪ್ರಯೋಗಗಳಿಗಾಗಿ ಮಕ್ಕಳನ್ನು ಪರೀಕ್ಷಿಸಲು ಪ್ರಾರಂಭಿಸಿದೆ.  ಜೂನ್ 7ರಂದು ಪ್ರಾರಂಭವಾದ ಈ ಪ್ರಯೋಗದಲ್ಲಿ 2 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಪ್ರಯೋಗ ನಡೆಸಲಾಗಿದೆ.  ಮೇ 12ರಂದು, ಎರಡು ವರ್ಷದೊಳಗಿನ ಮಕ್ಕಳ ಮೇಲೆ ಕೋವಾಕ್ಸಿನ್‌ನ 2 ಮತ್ತು 3ನೇ ಹಂತದ ಪ್ರಯೋಗಗಳನ್ನು ನಡೆಸಲು ಡಿಸಿಜಿಐ ಭಾರತ್ ಬಯೋಟೆಕ್‌ಗೆ ಅನುಮತಿ ಸಹ  ನೀಡಿತ್ತು ಎಂದಿದ್ದಾರೆ.

ಮಕ್ಕಳು ಸಹ ಪ್ರಯೋಗಗಳಿಗೆ ಬಂದಾಗ, ಅವರಲ್ಲಿನ ಆ್ಯಂಟಿ ಬಾಡಿಸ್ ಗಳನ್ನು ನಾವು ನೋಡುತ್ತೇವೆ. ದೇಶದ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ ಮತ್ತು ಲಸಿಕೆ ನೀಡದಿದ್ದರೂ ಸಹ, ಅವರು ಸ್ವಲ್ಪ ಪ್ರಮಾಣದ ನೈಸರ್ಗಿಕ ರಕ್ಷಣೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

Exit mobile version