ಕೋವಿಡ್-19; ಮೈಸೂರಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಸಿದ್ಧತೆ

ಮೈಸೂರು, ಜೂ. 01: ಕೋವಿಡ್ ನಿರ್ವಹಣೆಯಲ್ಲಿ ಹಲವು ಪ್ರಥಮಗಳನ್ನು ನಿರ್ಮಿಸಿರುವ ಮೈಸೂರು ಇದೀಗ ಮಹಿಳೆಯರಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಸಿದ್ಧತೆ ಕೈಗೊಂಡಿದೆ.

ಸಾಕಷ್ಟು ಮಹಿಳೆಯರು ನಾನಾ ಕಾರಣಗಳಿಂದ ಕೋವಿಡ್ ಕೇರ್ ಸೆಂಟರ್ ಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಹಿಳೆಯರಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ತಯಾರಿ ನಡೆಸುತ್ತಿದ್ದಾರೆ.

ಈ ಕೇಂದ್ರದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಂದ ಹಿಡಿದ ಎಲ್ಲರೂ ಮಹಿಳೆಯರೇ ಆಗಿರುತ್ತಾರೆ. ಇಂಥದೊಂದು ಪ್ರಯತ್ನ ಬೇರೆಲ್ಲೂ ನಡೆದಿಲ್ಲ ಎನ್ನಲಾಗಿದೆ.

ಅಲ್ಲದೇ, ಜುಲೈ 1ರಂದು ನಡೆಯುವ ರಾಷ್ಟ್ರೀಯ ವೈದ್ಯರ ದಿನಾಚರಣೆ ಒಳಗೆ ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಆ ಮೂಲಕ ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸುವ ಸಲುವಾಗಿ ಹಲವಾರು ಕ್ರಮಗಳನ್ನು ಜಾರಿಗೆ ತರಲಾಗಿದೆ. ಈಗಾಗಲೇ ಗ್ರಾಮೀಣ ಭಾಗದ ಜನರಿಗೆ ತಮ್ಮ ಮನೆ ಬಾಗಿಲ ಬಳಿಯಲ್ಲಿಯೇ ವೈದ್ಯಕೀಯ ಸೇವೆ ದೊರೆಯುವಂತೆ ಮಾಡಲು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋವಿಡ್ ಮಿತ್ರ ಕೇಂದ್ರಗಳಾಗಿ ಬದಲಾಯಿಸಲಾಗಿದೆ. ಕೋವಿಡ್ ಮಿತ್ರದಲ್ಲಿ ಸೋಂಕಿತರ ತಪಾಸಣೆ ಹಾಗೂ ಅವರಿಗೆ ಔಷಧ ನೀಡುವ ಕಾರ್ಯ ಪರಿಣಾಮಕಾರಿಯಾಗಿ ನಡೆಯುತ್ತಿದೆ.

ಅಲ್ಲದೆ ಜಿಲ್ಲೆಯಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ ಸೋಂಕಿತರನ್ನು ಪತ್ತೆ ಹಚ್ಚಿ ಅವರಿಗೆ ಔಷಧ ನೀಡುವ ಕಾರ್ಯ ಮಾಡಲಾಗುತ್ತಿದೆ. ಹೀಗಾಗಿ ಒಂದು ತಿಂಗಳ ಒಳಗೆ ಸೋಂಕು ಹತೋಟಿಗೆ ಬರುವ ವಿಶ್ವಾಸವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಫೇಸ್ ಬುಯಕ್ ಲೈವ್ ನಲ್ಲಿ ವ್ಯಕ್ತಪಡಿಸಿದರು.

Exit mobile version