ದಲಿತ ಸಿಎಂ ವಿಚಾರ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಶುರುವಾಯ್ತು ರಾಜಕೀಯ ಜಟಾಪಟಿ

ಬೆಂಗಳೂರು, ಜು. 23: ನಾಯಕತ್ವ ಬದಲಾವಣೆ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ, ‘ದಲಿತ ಸಿಎಂ’ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೊಸದೊಂದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ದಲಿತರನ್ನ ಸಿಎಂ ಮಾಡಲಿ: ಸಿದ್ದರಾಮಯ್ಯ
ಪ್ರಮುಖವಾಗಿ ದಲಿತ ಸಿಎಂ ವಿಚಾರದ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ನಡುವೆ ವಾಕ್ ಸಮರ ಶುರುವಾಗಿದೆ. ದಲಿತ‌ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪ್ರತಿಪಕ್ಷ‌ ನಾಯಕ ಸಿದ್ದರಾಮಯ್ಯ, ದಲಿತ ಮುಖ್ಯಮಂತ್ರಿ ಮಾಡಿ ಎಂದು ನಮಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಹಾಕುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ತೆರವಾಗುತ್ತಿದ್ದು, ತಾಕತ್ತಿದ್ದರೆ ನಳಿನ್ ಕುಮಾರ್ ಕಟೀಲ್ ದಲಿತರನ್ನು ಮುಖ‍್ಯಮಂತ್ರಿ ಮಾಡಲಿ. ಕಾಂಗ್ರೆಸ್ ನಲ್ಲಿ ಈಗಾಗಲೇ ನಾಲ್ವರು ದಲಿತರು ಸಿಎಂ ಅಗಿದ್ದಾರೆ. ಬಿಜೆಪಿ ಇದುವರೆಗೆ ದಲಿತರನ್ನು ಮುಖ‍್ಯಮಂತ್ರಿ ಮಾಡಿಲ್ಲ. ಇದೀಗ ಬಿಜೆಪಿಗೆ ಇಂತಹ ಅವಕಾಶ ರಾಜ್ಯದಲ್ಲಿ ಬಂದಿದ್ದು, ದಲಿತರನ್ನು ಮುಖ‍್ಯಮಂತ್ರಿ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು
ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ದಲಿತನೊಬ್ಬ ಸಿಎಂ ಆಗಬಾರದು ಎಂದು ಪರಮೇಶ್ವರ್‌ ಅವರನ್ನು ಸೋಲಿಸಿದ ಸಿದ್ದರಾಮಯ್ಯ, ಈಗ ದಲಿತ ಪ್ರೇಮ ತೋರ್ಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ʼದಲಿತ ಮುಖ್ಯಮಂತ್ರಿʼ ವಿಚಾರದಲ್ಲಿ ಮಾತನಾಡುವುದೂ ಒಂದೇ, ಗಾಂಧಿ ಕುಡಿಗಳು ʼಕುಟುಂಬ ರಾಜಕಾರಣʼದ ಬಗ್ಗೆ ಪ್ರವಚನ ನೀಡುವುದೂ ಒಂದೇ!

ದಲಿತರ ಬಗ್ಗೆ ನಿಮಗೆ ನಿಜಕ್ಕೂ ಕಾಳಜಿ ಇದ್ದರೆ ದಲಿತ ಸಮುದಾಯಕ್ಕೆ ಸೇರಿದವರೇ ಕಾಂಗ್ರೆಸ್ ಪಕ್ಷದ ಮುಂದಿನ ಮುಖ್ಯಮಂತ್ರಿ ಎಂದು ಈಗಲೇ ಘೋಷಿಸಿ. ಅದೆಲ್ಲ ಹೇಗೆ ಸಾಧ್ಯ, ʼನಾನೇ ಮುಂದಿನ ಸಿಎಂʼ ಎಂದು ಹೇಳಿಸಿಕೊಳ್ಳುವುದರಲ್ಲೇ ನೀವು ಬ್ಯುಸಿ ಆಗಿದ್ದೀರಿ ಅಲ್ವೇ? ಎಂದು ಟಾಂಗ್ ನೀಡಿದೆ.

ರಾಜ್ಯದಲ್ಲಿ ದಲಿತ ಸಿಎಂ ವಾದವನ್ನು ಹತ್ತಿಕ್ಕಿದ್ದೇ ಸಿದ್ದರಾಮಯ್ಯ. ಖರ್ಗೆ ಸೋಲಿನಲ್ಲೂ ಸಿದ್ರಾಮಯ್ಯ ಕರಿನೆರಳಿತ್ತು. ಸಿಎಂ ಆಗಿದ್ದಾಗ ದಲಿತ ನಾಯಕ ಪರಮೇಶ್ವರರಿಗೆ ಕಣ್ಣೀರು ಹಾಕಿಸಿದ್ದ ಸಿದ್ದರಾಮಯ್ಯ ಈಗ ಬೇರೆಯವರಿಗೆ ಉಪದೇಶ ನೀಡುತ್ತಿದ್ದಾರೆ. ಅಧಿಕಾರ ಇದ್ದಾಗಲೆಲ್ಲಾ ದಲಿತರಿಗೆ ಮಾಡಿದ್ದು ಅನ್ಯಾಯವೇ! ಎಂದು ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದೆ.

Exit mobile version