‘ಡಾರ್ಕ್ ಫ್ಯಾಂಟಸಿ’ ಟೀಸರ್ ಬಿಡುಗಡೆ

‘ಆಡಿಸಿದಾತ’ ಎನ್ನುವ ರಾಘವೇಂದ್ರ ರಾಜ್ ಕುಮಾರ್ ನಟನೆಯ ಚಿತ್ರ ನಿರ್ದೇಶಿಸಿದ್ದ ಫಣೀಶ್ ಭಾರಧ್ವಾಜ್ ಈಗ ಮತ್ತೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಜಾನರಿನ ಈ ಚಿತ್ರಕ್ಕೆ ʻಡಾರ್ಕ್ ಫ್ಯಾಂಟಸಿʼ ಎಂದು ಹೆಸರಿಡಲಾಗಿದೆ.

ಕೊರೊನಾ‌ ಪೂರ್ವದಲ್ಲೇ ಶುರುವಾದ ಚಿತ್ರ ಇದು. ಲಾಕ್ಡೌನ್ ಅನೌನ್ಸ್ ಆಗುವ ಹೊತ್ತಿಗೆ ಶೇ. 60ರಷ್ಟು ಚಿತ್ರೀಕರಣವೂ ಪೂರ್ತಿಯಾಗಿತ್ತು. ಕೋವಿಡ್ ಸಮಸ್ಯೆ ಎದುರಾಗಿರದಿದ್ದರೆ ಈ ಹೊತ್ತಿಗೆ ಚಿತ್ರ ತೆರೆಗೆ ಬಂದಿರುತ್ತಿತ್ತು. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಕ್ಕೆ ಅನುಮತಿ ಇರದ ಕಾರಣ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಚಿತ್ರತಂಡ ಪೂರೈಸಿಕೊಂಡಿದೆ. ‘ಡಾರ್ಕ್ ಫ್ಯಾಂಟಸಿ’ಗಾಗಿ ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂದು ಇಂಗ್ಲಿಷ್ ಹಾಡು ಸೇರಿದಂತೆ ಒಟ್ಟು ಐದು ಹಾಡುಗಳು ಈ ಸಿನಿಮಾದಲ್ಲಿವೆ.

ಇದು ಹಣದ ಸುತ್ತ ನಡೆಯುವ ಕತೆ ಇದಾಗಿದೆ. ನಾಯಕಿ ಸಾಂದರ್ಭಿಕ ಕಾರಣಗಳಿಂದ ಒಂದು ಕತ್ತಲ ಕಟ್ಟಡದೊಳಗೆ ಸಿಲುಕಿರುತ್ತಾಳೆ. ಹೊರಗೆ ಆಕೆಯ ಪ್ರಿಯಕರ ಪರಿತಪಿಸುತ್ತಿರುತ್ತಾನೆ. ಬದುಕಲ್ಲಿ ನೆಲೆನಿಲ್ಲಬೇಕು ಎಂದು ಬಯಸುವ ನಾಯಕನಟ, ಜೂಜು, ಬೆಟ್ಟಿಂಗುಗಳಿಂದ ಹಣ ಮಾಡಲು ನಿಂತ ಮತ್ತೊಬ್ಬ ವ್ಯಕ್ತಿ… ಹೀಗೆ ಹಲವಾರು ಪಾತ್ರಗಳು ಒಂದು ಕಡೆ ಸೇರುತ್ತವೆ. ಕತ್ತಲಿನಲ್ಲಿ ಸಿಕ್ಕಿಕೊಂಡ ನಾಯಕಿಗೆ ಬೆಳಕು ಗೋಚರಿಸುತ್ತದಾ? ದುಡ್ಡು ಮನುಷ್ಯರ ಚಿಂತನೆಯನ್ನು ಹೇಗೆ ಬದಲಿಸುತ್ತದೆ? ಹಣಕ್ಕಾಗಿ ಹೇಗೆ ಮಾರ್ಪಾಟಾಗುತ್ತಾರೆ? ಒಬ್ಬೊಬ್ಬರ ಬದುಕಲ್ಲೂ ನೋಟು ಹೇಗೆ ಆಟವಾಡುತ್ತದೆ ಎನ್ನುವುದೇ ಚಿತ್ರದ ಎಳೆ. ಡಾರ್ಕ್ ಫ್ಯಾಂಟಸಿಯಲ್ಲಿ ಸುನೀತಾ ಮತ್ತು ಸುಶ್ಮಿತಾ ಎಂಬ ಇಬ್ಬರು ನಾಯಕಿಯರಿದ್ದಾರೆ. ಶೋಭರಾಜ್, ಮನದೀಪ್ ರಾಯ್, ಮೋಹನ್ ಜುನೇಜ ಮುಂತಾದವರ ತಾರಾಗಣವಿದೆ. ನಾಗರಾಜ್ .ವಿ ಮತ್ತು ನಿತಿನ್ ಆರ್.ವಿ. ಸೇರಿ ನಿರ್ಮಿಸುತ್ತಿರುವ ಚಿತ್ರಕ್ಕೆ ಫಣೀಶ್ ಭಾರಧ್ವಾಜ್ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಆನಂದ್ ಇಲ್ಲರಾಜ ಛಾಯಾಗ್ರಹಣ, ಕ್ಲಾರೆನ್ಸ್ ಅಲೆನ್ ಕ್ರಾಸ್ಟಾ ಸಂಗೀತ, ತುಳಸೀರಾಮರಾಜು ಸಂಕಲನ, ಪದ್ಮನಾಭ್ ಭಾರದ್ವಾಜ್ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

ಡಾರ್ಕ್ ಫ್ಯಾಂಟಸಿ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಡಾ.ರಾಜ್ ಅವರ ಮೊಮ್ಮಕ್ಕಳಾದ ಧೀರೇನ್ ರಾಮ್ ಕುಮಾರ್, ಷಣ್ಮುಖ ಮತ್ತು ಎಸ್.ಎ. ಗೋವಿಂದರಾಜ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ʻಈ ಚಿತ್ರದ ನಾಯಕನಟ ಶ್ರೀ ನಮ್ಮ ಊರಿನ ಕಡೆಯವರು. ಇವರನ್ನು ನೋಡಿದಾಗಲೆಲ್ಲಾ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ ಎನ್ನುವ ಭರವಸೆ ಮೂಡುತ್ತದೆ. ನಿರ್ಮಾಪಕರು ಸಹಾ ನನ್ನ ಆತ್ಮೀಯರು ಡಾರ್ಕ್ ಫ್ಯಾಂಟಸಿ ಚಿತ್ರತಂಡಕ್ಕೆ ಒಳಿತಾಗಲಿʼ ಎಂದು ಎಸ್.ಎ. ಗೋವಿಂದರಾಜ್ ಹರಸಿದರು.

ಚಿತ್ರದ ಇನ್ನೊಂದು ಪ್ರಮುಖ ವಿಶೇಷತೆ ಏನೆಂದರೆ ಎಂಬತ್ತರ ದಶಕದಲ್ಲಿ ಚಿತ್ರರಂಗಕ್ಕೆ ಬಂದು ಶಿವರಾಜ್ ಕುಮಾರ್ ಅವರೊಟ್ಟಿಗೆ ಸಿನಿಮಾಗಳಲ್ಲಿ ನಟನೆ ಆರಂಭಿಸಿ ಡಾ.ರಾಜ್ ಕುಮಾರ್ ಅಭಿನಯದ ಜೀವನಚೈತ್ರ, ಮುಂತಾದ ಸಿನಿಮಾಗಳಲ್ಲಿ ಪಾತ್ರಪೋಷಣೆ ಮಾಡಿ ಹೆಸರು ಮಾಡಿದ ಬಾಲರಾಜ್ ಮರಳಿ ಬರುತ್ತಿದ್ದಾರೆ. ಡಾರ್ಕ್ ಫ್ಯಾಂಟಸಿಯಲ್ಲಿ ಅವರದು ಬಹುಮುಖ್ಯ ಪಾತ್ರ. ಈ ಸಂದರ್ಭದಲ್ಲಿ ಮಾತನಾಡಿದ ಅವರು ʻʻನಾನು ಚಿತ್ರರಂಗಕ್ಕೆ ಬರಲು ಇಬ್ಬರು ಕಾರಣಕರ್ತರು. ಹೊನ್ನವಳ್ಳಿ ಕೃಷ್ಣ ಮತ್ತು ಎಸ್.ಎ. ಗೋವಿಂದರಾಜ್. ಮದರಾಸಲ್ಲಿದ್ದ ನನ್ನನ್ನು ಬೆಂಗಳೂರಿಗೆ ಕರೆತಂದು, ಧ್ವನಿಮುದ್ರಣ ತಂತ್ರಜ್ಞನ ಕೆಲಸ ನೀಡಿದ್ದರು. ಆ ನಂತರ ನಾನು ಕಲಾವಿದನಾಗಿಯೂ ಗುರುತಿಸಿಕೊಂಡೆ. ಹಾಗೆ ಶುರುವಾದ ಪಯಣ ಇಲ್ಲಿಯವರೆಗೆ ಬಂದು ನಿಂತಿದೆ. ಈ ಚಿತ್ರದ ನಿರ್ಮಾಪಕ ನಾಗರಾಜ್ ನನ್ನ ಹಳೆಯ ಸ್ನೇಹಿತ. ಆನಂದ್ ಸಿನಿಮಾ ತೆರೆಗೆ ಬಂದ ಕಾಲದಿಂದಲೂ ಜೊತೆಗೇ ಇದ್ದೇವೆ.

ಫಣೀಶ್ ಬಂದು ಈ ಪಾತ್ರವನ್ನು ನೀವೇ ಮಾಡಬೇಕು ಅಂದರು. ಅವರು ಅಂದುಕೊಂಡಂತೆ ಪಾತ್ರ ನಿರ್ವಹಿಸಿದ್ದೀನಿ ಎನ್ನುವ ಭರವಸೆ ನನಗಿದೆ. ಹಗಲೂ ರಾತ್ರಿ ಚಿತ್ರೀಕರಣ ನಡೆಸಿದ್ದೇವೆ. ಎಲ್ಲರೂ ಶ್ರಮಿಸಿದ್ದೇವೆ. ಈ ಚಿತ್ರ ಇಡೀ ತಂಡಕ್ಕೆ ಉತ್ತಮ ಹೆಸರು ತಂದುಕೊಡಲಿದೆ” ಎಂದರು.
” ಡಿಸೆಂಬರ್ ವೇಳೆಗೆ ತೆರೆಮೇಲೆ ಡಾರ್ಕ್ ಫ್ಯಾಂಟಸಿ ಅನಾವರಣಗೊಳ್ಳಲಿದೆ” ಎಂದು ನಿರ್ಮಾಪಕ ನಿತಿನ್ ಆರ್.ವಿ. ತಿಳಿಸಿದ್ದಾರೆ.

Exit mobile version