ಮಾನಹಾನಿ ಮಾಡುವ ಅಥವಾ ನಕಲಿ ಖಾತೆಗಳನ್ನು ದೂರು ನೀಡಿದ 24 ತಾಸಿನೊಳಗೆ ತೆಗೆಯಬೇಕು: ಸಾಮಾಜಿಕ ಜಾಲತಾಣಗಳಿಗೆ ಭಾರತ ಸರ್ಕಾರ ಸೂಚನೆ

ನವದೆಹಲಿ,ಜೂ.24: ಭಾರತ ಸರ್ಕಾರ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ತರ ಹೆಜ್ಜೆ ಇರಿಸಿದ್ದು, ಮಾನಹಾನಿ ಮಾಡುವ ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಟ್ವಿಟರ್, ಫೇಸ್​ಬುಕ್, ಇನ್​ಸ್ಟಾಗ್ರಾಮ್​, ಯೂಟ್ಯೂಬ್ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಅಥವಾ ಮಾನಹಾನಿ ಉಂಟುಮಾಡುವ ಖಾತೆ ವಿರುದ್ಧ ದೂರು ಸಲ್ಲಿಕೆಯಾದ ಅಥವಾ ಗಮನಕ್ಕೆ ಬಂದ 24 ತಾಸಿನೊಳಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಹೇಳಿದೆ.

ಇದು ನೂತನ ಐಟಿ ನಿಯಮಗಳ ಭಾಗವಾಗಿದ್ದು, ಸಾಮಾಜಿಕ ಜಾಲತಾಣಗಳು ಕೂಡಲೇ ಇದನ್ನು ಅನ್ವಯಿಸಿಕೊಳ್ಳಬೇಕು. ದೂರು ಬಂದ ನಂತರ ವಿಳಂಬ ನೀತಿ ಅನುಸರಿಸದೆ ತಕ್ಷಣ ಕ್ರಮ ಕೈಗೊಳ್ಳಲು ಬದ್ಧರಾಗಿರಬೇಕು ಎಂದು ಇದೇ ಸಂದರ್ಭದಲ್ಲಿ ಸೂಚಿಸಲಾಗಿದೆ.

ಉದಾಹರಣೆಗೆ, ಯಾವುದೇ ಪ್ರಸಿದ್ಧ ಚಿತ್ರನಟ, ಕ್ರಿಕೆಟಿಗ, ರಾಜಕಾರಣ ಅಥವಾ ಯಾವುದೇ ವ್ಯಕ್ತಿ ತನ್ನ ಫೋಟೋ ಬಳಸಿ ಇನ್ನೊಂದು ಖಾತೆ ತೆರೆಯಲು ಆಕ್ಷೇಪಿಸಿದರೆ ಅದನ್ನು ಪರಿಗಣಿಸಬೇಕು. ಹಿಂಬಾಲಕರನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ, ಪ್ರಸಿದ್ಧರಾಗುವುದಕ್ಕಾಗಿ ಅಥವಾ ದುರುದ್ದೇಶಪೂರಿತವಾಗಿ ಅದನ್ನು ಬಳಸಿಕೊಳ್ಳುತ್ತಿದ್ದು ಆ ಬಗ್ಗೆ ಸಂಬಂಧಪಟ್ಟವರು ಧ್ವನಿ ಎತ್ತುವ ಅಧಿಕಾರ ಹೊಂದಿರುತ್ತಾರೆ. ಅಂತಹ ವೇಳೆಯಲ್ಲಿ ನಕಲಿ ಖಾತೆಗೆ ವೇದಿಕೆಯಾಗಿರುವ ಸಾಮಾಜಿಕ ಜಾಲತಾಣಗಳು ಅದನ್ನು ಕೂಡಲೇ ಅಳಿಸಬೇಕು. ಬಹುಮುಖ್ಯವಾಗಿ ವಿಚಾರ ಗಮನಕ್ಕೆ ಬಂದ 24 ತಾಸಿನಲ್ಲಿ ಈ ಪ್ರಕ್ರಿಯೆ ಆಗಬೇಕು ಎನ್ನುವುದು ನೂತನ ಐಟಿ ನಿಯಮಾವಳಿಗಳ ಪ್ರಕಾರ ಜಾರಿಯಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.

ಅಲ್ಲದೇ, ಬ್ಲ್ಯೂ ಟಿಕ್ ಸೌಲಭ್ಯದ ಬಗ್ಗೆ ಇನ್ನೂ ಅನೇಕರಿಗೆ ಜಾಗೃತಿಯಿಲ್ಲದ ಕಾರಣ, ಅದರ ಸದ್ಬಳಕೆ ಮಾಡಿಕೊಳ್ಳುವುದು ಸಾಧ್ಯವಾಗಿಲ್ಲ. ಆದ್ದರಿಂದ ಇದನ್ನೂ ಸರಳಿಕರಿಸಬೇಕು. ಒಟ್ಟಾರೆಯಾಗಿ ಹೊಸ ಐಟಿ ನಿಯಮಗಳು ಈಗಾಗಲೇ ಪ್ರಮುಖವೆಂದು ಪರಿಗಣಿಸಲ್ಪಟ್ಟಿರುವ ಎಲ್ಲಾ ಸಾಮಾಜಿಕ ಜಾಲತಾಣಗಳಿಗೂ, 50 ಲಕ್ಷಕ್ಕಿಂತ ಅಧಿಕ ಬಳಕೆದಾರರನ್ನು ಹೊಂದಿದವುಗಳಿಗೂ ಸದ್ಯ ಅನ್ವಯಿಸಲಿದೆ ಎಂದು ತಿಳಿಸಲಾಗಿದೆ.

Exit mobile version