ದೆಹಲಿಯಲ್ಲಿ ಭಾರಿ ಮಳೆ: ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಛಾವಣಿ ಕುಸಿದು ಓರ್ವ ಸಾವು.

New Delhi: ಇಷ್ಟು ದಿನ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ವರುಣನ ಆಗಮನ ಸಂತೋಷ ನೀಡುವ ಬದಲು ಚಿಂತೆಗೀಡು ಮಾಡಿದೆ. ನೀರಿನ ಅಭಾವದಿಂದ ತತ್ತರಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭರ್ಜರಿ ಮಳೆಯಾಗಿದೆ. ಇಡೀ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮವಾಗಿ ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 (Delhi Airport Terminal 1) ರಲ್ಲಿ ಛಾವಣಿ ಕುಸಿದು ಓರ್ವ ಸಾವನ್ನಪ್ಪಿದ್ದಾರೆ. ಆರು ಮಂದಿಗೆ ಗಾಯಗಳಾಗಿವೆ.

Airport

ರಾತ್ರಿಯಿಡಿ ಬಿಡುವಿಲ್ಲದೆ ಸುರಿದ ಮಳೆಯಿಂದಾಗಿ ಶುಕ್ರವಾರ ನಸುಕಿನ ಜಾವ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1 ನಿರ್ಗಮನ ಗೇಟ್‌ನಲ್ಲಿನ ಮೇಲ್ಛಾವಣಿ ಭಾಗವು ಕುಸಿದು ಬಿದ್ದ ಪರಿಣಾಮ ಓರ್ವ ಮೃತಪಟ್ಟಿದ್ದು 6 ಮಂದಿ ಗಂಭೀರ ಗಾಯಗೊಂಡಿದ್ದಾರೆ, ದುರ್ಘಟನೆಯಲ್ಲಿ ಟ್ಯಾಕ್ಸಿಗಳು ಮತ್ತು ಕಾರುಗಳು (Taxi, Cars) ಸೇರಿದಂತೆ ಅನೇಕ ವಾಹನಗಳು ಜಖಂಗೊಂಡಿವೆ.ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಟರ್ಮಿನಲ್ 1 ರಲ್ಲಿ ದುರ್ಘಟನೆ ನಡೆದಿದ್ದು, ಸುರಕ್ಷತಾ ಕ್ರಮಗಳಾಗಿ ಟರ್ಮಿನಲ್‌ನಿಂದ ಎಲ್ಲಾ ಚೆಕ್-ಇನ್‌ ಮತ್ತು ನಿರ್ಗಮನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ (DIAL) ಪ್ರಯಾಣಿಕರಿಗೆ ತಿಳಿಸಿದೆ.

ಈ ಘಟನೆಯ ಪರಿಣಾಮವಾಗಿ, ಟರ್ಮಿನಲ್ 1 ರಿಂದ ಎಲ್ಲಾ ನಿರ್ಗಮನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ಸುರಕ್ಷತಾ ಕ್ರಮವಾಗಿ ಚೆಕ್-ಇನ್ ಕೌಂಟರ್‌ (Check-In Counter)ಗಳನ್ನು ಮುಚ್ಚಲಾಗಿದೆ. ಟರ್ಮಿನಲ್ 1 ರಿಂದ ಕಾರ್ಯನಿರ್ವಹಿಸುವ ಎರಡು ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಸ್ಪೈಸ್‌ಜೆಟ್‌ (Indigo and SpiceJet) ಗಳ ವಿಮಾನ ಕಾರ್ಯಾಚರಣೆಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ. ಅನಾನುಕೂಲತೆಗಾಗಿ ನಾವು ಪ್ರಯಾಣಿಕರಲ್ಲಿ ಕ್ಷಮೆಯಾಚಿಸುತ್ತೇವೆ ಎಂದು ಟ್ವೀಟ್ ಮಾಡಿದೆ.

ಇನ್ನು ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ನೀರು ನಿಂತು ಪ್ರಯಾಣಿಕರು ಪರದಾಡಬೇಕಾಗಿದೆ. ಟ್ರಾಫಿಕ್ ಕಂಟ್ರೋಲ್ ರೂಮ್‌ (Traffic Control Room)ನಲ್ಲಿ ಸಂಚಾರ ದಟ್ಟಣೆ, ಅಲ್ಲಲ್ಲಿ ನೀರು ನಿಂತಿರುವ ಬಗ್ಗೆ, ಮರಗಳು ಬಿದ್ದಿರುವ ಬಗ್ಗೆ ದೆಹಲಿಯ ಹಿರಿಯ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
 

Exit mobile version