Bengaluru: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಅವರು ಟ್ವೀಟ್ ಮಾಡಿದ್ದು, ರಾಜ್ಯದ ವಿಚಾರದಲ್ಲಿ ವಿಚಾರದಲ್ಲಿ ಕೇಂದ್ರ ಸರ್ಕಾರವು ಕಣ್ಣಿದ್ದೂ ಕುರುಡಾಗಿದೆ, ಕಿವಿಯಿದ್ದು ಕಿವುಡನಂತೆ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ (Karnataka) ಬಹುತೇಕ ಪ್ರದೇಶಗಳು ತೀವ್ರ ಬರಗಾಲಕ್ಕೆ ಸಿಲುಕಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರವು ಕೇಂದ್ರಕ್ಕೆ ಹಲವು ಬಾರಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಆದರೂ ಪರಿಹಾರ ಸಿಕ್ಕಿಲ್ಲ ಎಂದು ಕಿಡಿಕಾರಿದ್ದಾರೆ. ಕೇಂದ್ರದ ಬರ ಅಧ್ಯಯನ ತಂಡವು ರಾಜ್ಯಕ್ಕೆ ಬಂದು ಹೋಗಿ ತಿಂಗಳುಗಳು ಕಳೆದಿವೆ.
ಮುಖ್ಯಮಂತ್ರಿಗಳೇಖುದ್ದಾಗಿ ಪ್ರಧಾನಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ಬರ ಪರಿಹಾರಕ್ಕೆ ಮನವಿ ಸಲ್ಲಿಸಿದ್ದು, ಅನೇಕ ಸಚಿವರುಗಳು ಕೇಂದ್ರ ಕೃಷಿ ಮಂತ್ರಿಗಳನ್ನು, ಹಣಕಾಸು ಮಂತ್ರಿಗಳನ್ನು ಭೇಟಿ ಮಾಡಿ ಹಲವು ಬಾರಿ ಬರ ಪರಿಹಾರ (Drought Relief) ಬಿಡುಗಡೆಗೆ ಒತ್ತಾಯಿಸಿದ್ದಾರೆ. ಆದರೆ ಇದುವರೆಗೂ ಕೇಂದ್ರ ಸರ್ಕಾರವು ರಾಜ್ಯದ ಮನವಿಗೆ ಸ್ಪಂದಿಸಿಲ್ಲ ಎಂದು ದೂರಿದ್ದಾರೆ.
ಕೇಂದ್ರ ಬಿಜೆಪಿ (BJP) ಸರ್ಕಾರವು ರಾಜ್ಯದ ಜನತೆಯ ವಿರುದ್ಧ ಚುನಾವಣಾ ಸೋಲಿನ ದ್ವೇಷ ಸಾಧಿಸುವ ರೀತಿಯಲ್ಲಿ ವರ್ತಿಸುತ್ತಿದ್ದು, ರಾಜ್ಯದ 25 ಬಿಜೆಪಿ ಸಂಸದರಿಗೆ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರುಗಳಿಗೆ ಮೋದಿಯವರ ಬಳಿ ರಾಜ್ಯದ ಪರವಾಗಿ ಮಾತನಾಡಲು ಬೆನ್ನು ಮೂಳೆ ಇಲ್ಲದಂತಾಗಿದೆ ಎಂದರು.
ಬರ ಪರಿಹಾರವಾಗಿ ತಲಾ 2ಸಾವಿರ ರೂಪಾಯಿ ಘೋಷಿಸಿದ್ದು, ಬರ ಪರಿಹಾರಕ್ಕೆ ತುರ್ತು ನೆರವು ಕೋರಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಡಿಸೆಂಬರ್ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ತುರ್ತು ನೆರವು ಕೊಡುವಂತೆ ಮನವಿಯನ್ನು ಸಲ್ಲಿಸಿದ್ದರು. ಆದರೆ ಈವರೆಗೂ ಕೇಂದ್ರದಿಂದ ಬರ ಪರಿಹಾರ ಮಾತ್ರ ಸಿಕ್ಕಿಲ್ಲ.
ಬರ ಘೋಷಣೆ ಹಿನ್ನೆಲೆಯಲ್ಲಿ ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸಿ ವರದಿಯನ್ನು ನೀಡಿದ್ದು, ರಾಜ್ಯದಲ್ಲಿ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ((Narendra Modi) ಅವರ ಭೇಟಿಗೆ ಸಿಎಂ ಸಿದ್ದರಾಮಯ್ಯ ಪದೇ ಪದೇ ಸಮಯ ಕೇಳಿದ್ದರು.
ಮೋದಿ ಭೇಟಿ ಬಳಿಕ ಸಿದ್ದರಾಮಯ್ಯ ರಾಜ್ಯದ ಬರ ಪರಿಸ್ಥಿತಿಯ ಕುರಿತಾಗಿ ಎಲ್ಲಾ ರೀತಿಯ ಮಾಹಿತಿಯನ್ನು ನೀಡಿದ್ದು, ಆದರೆ ಈವರೆಗೂ ರಾಜ್ಯಕ್ಕೆ ಬರ ಪರಿಹಾರ ಮಾತ್ರ ಬಿಡುಗಡೆಯಾಗಿಲ್ಲ.
ಭವ್ಯಶ್ರೀ ಆರ್ ಜೆ