ಧಾರವಾಡದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಣೆ ಮಾಡಿದ ದಿಂಗಾಲೇಶ್ವರ ಶ್ರೀ

Bengaluru: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಫಕೀರ ದಿಂಗಾಲೇಶ್ವರ ಶ್ರೀ (Dingaleshwar Swamiji) ಘೋಷಿಸಿದ್ದಾರೆ. ಇನ್ನು ಲಿಂಗಾಯತ ಮತಗಳು ಅಧಿಕವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ, ಬ್ರಾಹ್ಮಣ ಸಮಾಜದ ಪ್ರಲ್ಹಾದ್ ಜೋಶಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಕುರುಬ ಸಮಾಜದ ವಿನೋದ್ ಅಸೂಟಿ ಕಣದಲ್ಲಿದ್ದಾರೆ.

ಈಗಾಗಲೇ ನೊಂದ ಸಮಾಜಗಳು ನಮ್ಮ ಬಳಿ ನೋವು ತೋಡಿಕೊಂಡಿವೆ. ಲಿಂಗಾಯತ, ಗೌಡ ಸಮುದಾಯದ ಬಳಿಕ ಕುರುಬ ಸಮುದಾಯ ಹೆಚ್ಚು ಸಂಖ್ಯೆಯಲ್ಲಿ ಇದೆ. ಆದ ಕಾರಣ ಈ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ. ಪ್ರಹ್ಲಾದ್ ಜೋಷಿ (Prahlad Joshi) ಆಡಳಿತದಲ್ಲಿ ಹಲವರು ಜನ ನೊಂದು ಬೆಂದಿದ್ದಾರೆ.ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಲಿಂಗಾಯತರಿಗೆ ಘನಘೋರ ಅನ್ಯಾಯ ಮಾಡಲಾಗಿದೆ. ಮೊದಲನೆಯದಾಗಿ ಜಗದೀಶ್​ ಶೆಟ್ಟರ್​ ಅವರ ಟಿಕೆಟ್​ ಕಬಳಿಸಿದ್ದಾರೆ.

ಬಿಎಸ್​ ಯಡಿಯೂರಪ್ಪ (B.S Yediyurappa) ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅರ್ಧಕ್ಕೆ ಕೆಳಗೆ ಇಳಿಸಿ ಮೂಲೆ ಗುಂಪಾಗಿಸಿದ್ದಾರೆ ಇದು ಲಿಂಗಾಯತ ಸಮುದಾಯದವರಿಗೆ ಮಾಡಿದ ಅಪಮಾನ ಹಾಗಾಗಿ ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಈಗಾಗಲೇ ಒಂಭತ್ತು ಜನ ವೀರಶೈವ ಸಮಾಜದ ಜನ ಸಂಸತ್ತು ಪ್ರವೇಶ ಮಾಡಿದ್ದಾರೆ. ಒಬ್ಬರಿಗೂ ಕ್ಯಾಬಿನೆಟ್ (Cabinet) ಸ್ಥಾನ ಕೊಡಲಿಲ್ಲ. ಶಿಕ್ಷಣ ಖಾತೆ ತಾವು ಇಟ್ಟುಕೊಳ್ತಾರೆ, ಪಶು ಸಂಗೋಪನೆ ಖಾತೆಯನ್ನು ಹಿಂದುಳಿದ ದಲಿತ ಸಮುದಾಯಕ್ಕೆ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಎಷ್ಟು ತಾರತಮ್ಯಗಳಿದೆ ಈಗಿರುವ ಪಕ್ಷಗಳಲ್ಲಿ ಎಂದು ಕಿಡಿಕಾರಿದ್ದಾರೆ.

ಇನ್ನು, ನಾನು ಬ್ರಾಹ್ಮಣ ಸಮುದಾಯದ ಅಭಿಮಾನಿ, ಬ್ರಾಹ್ಮಣ (Brahman) ಸಮುದಾಯದ ವಿರೋಧಿ ಅಲ್ಲ ಅನೇಕ ನಮ್ಮ ಮಠಾಧೀಶರು ಹಾಗೂ ಬ್ರಾಹ್ಮಣ ಸಮುದಾಯದ ಸ್ವಾಮೀಜಿಗಳೇ ನನಗೆ ಚುನಾವಣೆಯಲ್ಲಿ ನಿಲ್ಲುವಂತೆ ಸಲಹೆ ನೀಡಿದ್ದಾರೆ. ಎಲ್ಲಾ ಸಮುದಾಯದ ಸ್ವಾಮೀಜಿಗಳನ್ನು ಕೇವಲ ಉದ್ಘಾಟನೆಗಷ್ಟೇ ಸೀಮಿತಗೊಳಿಸುವ ಪ್ರಯತ್ನ ಪ್ರಹ್ಲಾದ್ ಜೋಷಿ ಮಾಡ್ತಿದ್ದಾರೆ. ಹೀಗಾಗಿ ನಾನು ರಾಜಕಾರಣಕ್ಕೆ ಪ್ರವೇಶಿಸಬೇಕಾಯಿತು ಎಂದಿದ್ದಾರೆ.

Exit mobile version