ಆಗ ಯಾಕೆ ತಾವು ನುಡಿದಂತೆ ನಡೆಯಲಿಲ್ಲ? ಡಿಕೆಶಿಗೆ ಕುಟುಕಿದ ಎಚ್ಡಿಕೆ

2006-2007ರಲ್ಲೇ ಮಹಾದಾಯಿ ಯೋಜನೆಗೆ ಸಂಪುಟದಲ್ಲಿಯೇ ಒಪ್ಪಿಗೆ ನೀಡಿ, ₹100 ಕೋಟಿ ಮಂಜೂರು ಮಾಡಿ ಆಗಲೇ ಶಂಕುಸ್ಥಾಪನೆಯನ್ನೂ ನೆರವೇರಿಸಲಾಯಿತು. ಆಮೇಲೆ 5 ವರ್ಷ ನಿಮ್ಮದೇ ಕಾಂಗ್ರೆಸ್ (Congress) ಸರಕಾರ ಇತ್ತಲ್ಲಾ..? ಏನ್ ಮಾಡ್ತಾ ಇದ್ದಿರಿ ಶಿವಕುಮಾರ್ ಅವರೇ? ಆಗ ಯಾಕೆ ತಾವು ನುಡಿದಂತೆ ನಡೆಯಲಿಲ್ಲ? ಎಂದು ಡಿಸಿಎಂ ಡಿಕೆ ಶಿವಕುಮಾರ್ (D.K Shivakumar) ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಮೇಕೆದಾಟು ವಿವಾದಕ್ಕೆ (Mekedatu Controversy) ಸಂಬಂಧಿಸಿದಂತೆ ಡಿಕೆಶಿಗೆ ಹಲವು ಪ್ರಶ್ನೆಗಳನ್ನು ಹಾಕಿರುವ ಕುಮಾರಸ್ವಾಮಿ ಅವರು, ಅಧಿಕಾರ ಇರುವುದು ನಿಮ್ಮ ಕೈಯ್ಯಲ್ಲಿ. ಜನ ಪೆನ್ನು-ಪೇಪರ್ ಕೊಟ್ಟಿರುವುದೂ ನಿಮಗೇ. ಕೆಲಸ ಮಾಡಿ ಎಂದರೆ ಹಳೆಯದನ್ನು ಕೆದಕುತ್ತಿದ್ದೀರಿ, ಯಾಕೆ? ಜನರು ಕೊಟ್ಟ ಪೆನ್ನು-ಪೇಪರ್ ಹಿಡಿದುಕೊಳ್ಳುವ ನಿಮ್ಮ ಶಕ್ತಿ ಕೇವಲ ಹತ್ತೇ ತಿಂಗಳಿಗೆ ನಿಸ್ತೇಜವಾಯಿತಾ ಡಿಕೆ ಶಿವಕುಮಾರ್ ಅವರೇ? ಕೈಲಾಗದೆ ಮೈ ಪರಚಿಕೊಳ್ಳುವುದು ಎಂದರೆ ಇದೆ ಅಲ್ಲವೇ?

ಅಧಿಕಾರ ಇದ್ದಾಗಲೇ ಕುಮಾರಸ್ವಾಮಿ (Kumaraswamy) ಅವರು ಮೇಕೆದಾಟು ಮಾಡಲಿಲ್ಲ ಎಂದು ಹೇಳಿದ್ದೀರಿ! ಕುಮಾರಸ್ವಾಮಿ ಏನೂ ಮಾಡಿಯೇ ಇಲ್ಲವೆಂದು ಕಟ್ಟುಕಥೆ ಕಟ್ಟಿದ್ದೀರಿ. ಎಷ್ಟಾದರೂ ನೀವು ಸುಳ್ಳು ಫ್ಯಾಕ್ಟರಿಯ ಮೇಟಿ! ಮೇಕೆದಾಟುಗಾಗಿ ನಾನು ಏನೆಲ್ಲಾ ಮಾಡಿದೆ ಎನ್ನುವುದು ನಿಮಗೇಗೆ ಗೊತ್ತಾದೀತು? ಸತ್ಯಕ್ಕೂ ನಿಮಗೂ ಎಣ್ಣೆಶೀಗೇಕಾಯಿ ಸಂಬಂಧ! ಹೌದಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮೇಕೆದಾಟು ನಿರ್ಮಾಣಕ್ಕೆ 2018-19ರಲ್ಲೇ ಸಮಗ್ರ ಯೋಜನಾ ವರದಿ (DPR) ಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು ಅಂದಿನ ನನ್ನ ಸರಕಾರ.

ಆ ಸರಕಾರದಲ್ಲಿ ನೀವು ಸಚಿವರಿದ್ದಿರಿ. ಈ ಮಾಹಿತಿಯೇ ನಿಮಗಿಲ್ಲವೆಂದರೆ ಹೇಗೆ? ಇದೆಂಥಾ ಹತವಿಧಿ!? ಹಾಗಾದರೆ, ಜನರು ಕೊಟ್ಟ ಪೆನ್ನು-ಪೇಪರ್ ಗತಿ ಏನು? ಮೇಕೆದಾಟು, ಮಹದಾಯಿ ಸೇರಿ ರಾಜ್ಯದ ನೀರಾವರಿ ಯೋಜನೆಗಳಿಗಾಗಿ ನಾನು ಮುಖ್ಯಮಂತ್ರಿಯಾಗಿ ಆಯಾ ಇಲಾಖೆಯ ಕೇಂದ್ರ ಸಚಿವರನ್ನು ಎಷ್ಟು ಸಲ ಭೇಟಿಯಾಗಿದ್ದೆ ಎನ್ನುವ ಮಾಹಿತಿಯೂ ನಿಮಗಿಲ್ಲವಲ್ಲ? ನಿತಿನ್ ಗಡ್ಕರಿ (Nitin Gadkari) ಅವರೊಬ್ಬರನ್ನೇ ನಾನು 10 ಸಲ ಭೇಟಿಯಾಗಿದ್ದೆ.

90ರ ಇಳಿವಯಸ್ಸಿನಲ್ಲಿಯೂ ಶ್ರೀ ದೇವೇಗೌಡರು (Shree Devegowda) ಸಂಸತ್ತಿನ ಒಳ-ಹೊರಗೆ ರಾಜ್ಯಕ್ಕಾಗಿ ಅವಿರತವಾಗಿ ಹೋರಾಡುತ್ತಿದ್ದಾರೆ. ಸಂಸತ್ ಅಧಿವೇಶನದಲ್ಲಿ ಅವರು ಮೇಕೆದಾಟು ಬಗ್ಗೆ ದನಿ ಎತ್ತಿದರೆ, ರಾಜ್ಯದವರೇ ಆದ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮೌನವ್ರತ ಮಾಡುತ್ತಿದ್ದರು! ನಿಮ್ಮ ಪಕ್ಷದ ಉಳಿದ ಸದಸ್ಯರು ನಿಮ್ಮ ಅಧ್ಯಕ್ಷರು ಮಾಡಿದ್ದನ್ನೇ ಚಾಚೂ ತಪ್ಪದೇ ಪಾಲಿಸುತ್ತಿದ್ದರು ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್, ಡಿಎಂಕೆ (DMK) ಅಣ್ತಮ್ಮ ಪಕ್ಷಗಳಲ್ಲವೇ? ಮೇಕೆದಾಟು ಮಾಡಲು ಕರ್ನಾಟಕದವರಿಗೆ ಬಿಡೋದೇ ಇಲ್ಲ ಎಂದು ಡಿಎಂಕೆ ಚುನಾವಣೆ ಪ್ರಣಾಳಿಕೆಯಲ್ಲೇ ಘೋಷಣೆ ಮಾಡಿದೆ. ಇದಕ್ಕೂ ನಿಮ್ಮದು, ನಿಮ್ಮ ಪಕ್ಷದ್ದು ‘ಮೌನಂ ಶರಣಂ ಗಚ್ಛಾಮಿ!!’ ನಿಮ್ಮ ಸರಕಾರದಲ್ಲಿ ಏನೇನ್ ನಡೀತಿದೆ ಶಿವಕುಮಾರ್ ಅವರೇ? ಪೆನ್ನು ಪೇಪರ್ ಕೂಡ ‘ಮೌನಂ ಶರಣಂ ಗಚ್ಛಾಮಿ’ ಎನ್ನುತ್ತಿವೆಯಾ.. ಹೇಗೆ? ಎಂದು ಪ್ರಶ್ನಿಸಿದ್ದಾರೆ.

Exit mobile version