ಹೊಸ ತಂತ್ರಜ್ಞಾನದಲ್ಲಿ ‘ಭಾಗ್ಯವಂತರು’

ಭಾರ್ಗವ ಅವರ ನಿರ್ದೇಶನದಲ್ಲಿ ಡಾ. ರಾಜಕುಮಾರ್ ಹಾಗೂ ಬಿ.ಸರೋಜಾದೇವಿ ಅವರು ನಟಿಸಿದ್ದ ಸೂಪರ್ ಹಿಟ್ ಚಿತ್ರ ‘ಭಾಗ್ಯವಂತರು.’ ಇದೀಗ ಅದೇ ಸಿನಿಮಾ ವಿನೂತನ ತಂತ್ರಜ್ಞಾನದೊಂದಿಗೆ ಮುಂದಿನ ತಿಂಗಳು ತೆರೆಗೆ ಬರಲಿದೆ ಎಂದು ತಿಳಿದು ಬಂದಿದೆ.

ಭಾಗ್ಯವಂತರು ಚಿತ್ರ ಇದೀಗ ಡಿ.ಐ, 7.1 ಟ್ರ್ಯಾಕ್ ಸೇರಿದಂತೆ ಅನೇಕ ನವೀನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಮರು ಬಿಡುಗಡೆಯಾಗುತ್ತಿದೆ. ಮುನಿರಾಜು ಈ ಚಿತ್ರವನ್ನು ಮತ್ತೆ ತೆರೆಗೆ ತರುತ್ತಿದ್ದಾರೆ.

ನನ್ನ ಮೊದಲ ನಿರ್ದೇಶನದ ಚಿತ್ರ “ಭಾಗ್ಯವಂತರು”. ದ್ವಾರಕೀಶ್ ಈ ಚಿತ್ರದ ನಿರ್ಮಾಪಕರು. ನಾನು ಆಗಲೇ ರಾಜಕುಮಾರ್ ಅವರು ನಟಿಸಿದ್ದ ಬಬ್ರುವಾಹನ, ನಾ ನಿನ್ನ ಮರೆಯಲಾರೆ, ಜಗ ಮೆಚ್ಚಿದ ಮಗ ಸೇರಿದಂತೆ ಅನೇಕ ಚಿತ್ರಗಳಿಗೆ ಸಹ ನಿರ್ದೇಶನ ಮಾಡಿದ್ದೆ. ಹಾಗಾಗಿ ರಾಜ್ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ . ನನಗೂ ಅವರೆಂದರೆ ಅಷ್ಟೇ ಪ್ರೀತಿ. ನಿರ್ಮಾಪಕ ದ್ವಾರಕೀಶ್ ಹಾಗು ರಾಜಕುಮಾರ್ ಇಬ್ಬರೂ ನೀವೆ ಈ ಚಿತ್ರ ನಿರ್ದೇಶನ ಮಾಡಿ ಎಂದರು. ಆಗ 44ವರ್ಷಗಳ ಹಿಂದೆ ನಾನು ‘ಭಾಗ್ಯವಂತರು” ಚಿತ್ರವನ್ನು ನಿರ್ದೇಶಿಸಿದ್ದೆ. ನನ್ನ ಮೊದಲ ನಿರ್ದೇಶನದ ಚಿತ್ರವೇ ಸೂಪರ್ ಹಿಟ್ ಆಯಿತು. ಈಗ ಮುನಿರಾಜು ನೂತನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಈ ಚಿತ್ರವನ್ನು ಮರು‌ ಬಿಡುಗಡೆ ಮಾಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದರು ಹಿರಿಯ ನಿರ್ದೇಶಕ ಭಾರ್ಗವ.

ನಾನು ಅಪ್ಪಟ ಅಣ್ಣಾವ್ರ ಅಭಿಮಾನಿ. ರಾಜಕುಮಾರ್ ಎಂದರೆ ನನ್ನ ಪ್ರಾಣ. 78 ನೇ ಇಸವಿಯಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು. ಹದಿನೆಂಟು ವರ್ಷಗಳ ಕಾಲ ವಜ್ರೇಶ್ವರಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಪಾರ್ವತಮ್ಮ ರಾಜಕುಮಾರ್ ಅವರೆ ನನ್ನನ್ನು ಮೊದಲು‌ ಚಿತ್ರಮಂದಿರದ ಆರ್ ಪಿ ಯಾಗಿ ನೇಮಕ‌ ಮಾಡಿ ಯಳಂದೂರಿಗೆ ಕಳುಹಿಸಿದ್ದರು. ನಾನು ಮೊದಲು ಮರು ಬಿಡುಗಡೆ ಮಾಡಿದ ಚಿತ್ರ ಆಪರೇಷನ್ ಡೈಮಂಡ್ ರಾಕೇಟ್. ನಂತರ ನಾನೊಬ್ಬ ಕಳ್ಳ. ಹೀಗೆ ರಾಜಕುಮಾರ್ ಅವರ ನಾಲ್ಕೈದು ಚಿತ್ರಗಳನ್ನು ಮರು ಬಿಡುಗಡೆ ಮಾಡಿದ್ದೇನೆ. ಈಗ “ಭಾಗ್ಯವಂತರು” ಚಿತ್ರವನ್ನು ಸುಮಾರು ನೂರೈವತ್ತಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಚಿತ್ರ ರೀರಿಲೀಸ್ ಮಾಡುತ್ತಿರುವ ಮುನಿರಾಜು.

ಬಿ.ಜೆ.ಪಿ ಮುಖಂಡ ಪ್ರಸನ್ನಕುಮಾರ್, ಸಹ ನಿರ್ದೇಶಕ ರವಿರಾಜ್, ದಯಾನಂದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Exit mobile version