ಈ ವಾರ ತೆರೆಗೆ `ನಾನೊಂಥರ’

ಈ ಹಿಂದೆ ಒಂದೆರಡು ಚಿತ್ರಗಳಲ್ಲಿ ನಟಿಸಿರುವ ತಾರಕ್ ಅವರು ಚಿರಂಜೀವಿ ಸರ್ಜಾ ಅವರು ನಟಿಸಿರುವ ಖಾಕಿ’ ಸಿನಿಮಾದಲ್ಲಿ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದರು. ಮೊದಲ ಬಾರಿ ಕಮರ್ಷಿಯಲ್ ಹೀರೋ ಆಗಿ ನಟಿಸುತ್ತಿರುವುದಕ್ಕೆ ಖುಷಿ, ಆತಂಕ ಎರಡೂ ಇದೆ ಎಂದ ತಾರಕ್, “ಇದರಲ್ಲಿ ತಮ್ಮ ಪಾತ್ರಕ್ಕೆ ಮೂರು ರೀತಿಯ ವೇರಿಯೇಶನ್ಸ್ ಇವೆ. ಕಾಲೇಜ್ ಹುಡುಗ, ಕುಡುಕ ಮತ್ತು ಸಂಸಾರಸ್ಥನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇವುಗಳಲ್ಲಿ ಕುಡುಕನ ಪಾತ್ರದಲ್ಲಿ ನಿಭಾಯಿಸಲು ಹೆಚ್ಚು ಅವಕಾಶಗಳಿದ್ದವು” ಎಂದರು. ಅವರುನಾನೊಂಥರ’ ಚಿತ್ರದ ಬಿಡುಗಡೆಪೂರ್ವ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಯುವ ನಿರ್ದೇಶಕ ರಮೇಶ್ ಅವರ ನಿರ್ದೇಶನದ ಮೊದಲ ಚಿತ್ರ ಇದು. “ಈ ಚಿತ್ರದಲ್ಲಿ ನಾಯಕ ಒಂಥರಾ ಕುಡುಕ ಆಗಿರುತ್ತಾನೆ. ಕುಡಿತ ಎನ್ನುವುದು ದುರಭ್ಯಾಸವಾಗಿದ್ದರೂ ಈ ಕುಡುಕ ಒಳ್ಳೆಯ ಮನಸಿನ ಯುವಕ. ಆತನ ಹೇಗೆಲ್ಲ ಸಮಾಜದ ಕೆಡುಕುಗಳ ವಿರುದ್ಧ ನಿಲ್ಲುತ್ತಾನೆ ಎನ್ನುವುದಕ್ಕೆ ಒಂದೆರಡು ನೈಜ ಘಟನೆಗಳನ್ನು ಸ್ಫೂರ್ತಿಯಾಗಿರಿಸಿಕೊಂಡು ಕತೆ ಮಾಡಿದ್ದೇನೆ. ಆರಂಭದಲ್ಲಿ ನಿರ್ಮಾಪಕರು ಕೈಕೊಟ್ಟಾಗ ಚಿತ್ರದ ನಾಯಕ ತಾರಕ್ ಅವರೇ ಹೊಸ ನಿರ್ಮಾಪಕರನ್ನು ಪರಿಚಯ ಮಾಡಿ ನನ್ನಿಂದಲೇ ಚಿತ್ರ ನಿರ್ದೇಶಿಸಲು ಶಿಫಾರಸ್ಸು ಮಾಡಿದ್ದಾರೆ. ಚಿತ್ರದ ಮೂಲಕ ಪೊಲೀಸ್‌ ಇಲಾಖೆಗೆ, ವೈದ್ಯರಿಗೆ, ಸಾರ್ವಜನಿಕರಿಗೆ ಎಲ್ಲರಿಗೂ ರವಾನೆ ಮಾಡಬಹುದಾದ ಸಂದೇಶಗಳಿವೆ” ಎನ್ನುತ್ತಾರೆ ಅವರು. ಚಿತ್ರದ ನಾಯಕಿ ರಕ್ಷಿಕಾ ತಾನು ಚಿತ್ರದಲ್ಲಿ ವೈದ್ಯೆಯ ಪಾತ್ರ ನಿಭಾಯಿಸಿದ್ದು ಕುಡುಕ ನಾಯಕನ ಬದುಕಲ್ಲಿ ಬದಲಾವಣೆ ತರುವ ಪಾತ್ರ ತಮ್ಮದಾಗಿದೆ ಎಂದರು. ತನ್ನನ್ನು ನಾಯಕಿಯಾಗಲು ಆಫರ್ ನೀಡಿದ ತಾರಕ್ ಗೆ ಅವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ನಾಯಕನ ತಮ್ಮನಾಗಿ ನಟಿಸಿರುವ ಜೈಸನ್ ಅವರಿಗೆ ಇದು ಮೊದಲ ಚಿತ್ರ. ಅಂದಹಾಗೆ ಅವರು ನಿರ್ಮಾಪಕಿ ಜಾಕ್ವಲಿನ್ ಅವರ ಪುತ್ರನೂ ಹೌದು.

ವೃತ್ತಿಯಲ್ಲಿ ವೈದ್ಯೆಯಾಗಿರುವ ನಿರ್ಮಾಪಕಿ ಡಾ.ಜಾಕ್ವಲಿನ್ ಅವರು ಈ ಹಿಂದೆ ಬಾಲನಟಿಯಾಗಿ ನಟಿಸಿದ ಅನುಭವ ಹೊಂದಿದ್ದಾರೆ. ಡಾ.ರಾಜ್ ಅಭಿನಯದ `ಧ್ರುವತಾರೆ’ ಸಿನಿಮಾದಲ್ಲಿ ಬಾಲನಟಿಯಾಗಿದ್ದು ಮರೆಯಲಾಗದ ಅನುಭವ. ಈ ಚಿತ್ರದಲ್ಲಿ ಕೂಡ ಚಿಕ್ಕದೊಂದು ಪಾತ್ರ ಮಾಡಿರುವುದಾಗಿ ಹೇಳಿದ ಅವರು, “ಇದುವರೆಗೆ ನಡೆದಿರುವ ಮಾತುಕತೆಯ ಪ್ರಕಾರ ಸಿನಿಮಾ ಎಂಬತ್ತಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿತರಕ ವಿಜಯ್ ಅವರೊಡನೆ ನಡೆಸಿರುವ ಮಾತುಕತೆಯ ಪ್ರಕಾರ ಶುಕ್ರವಾರದ ಹೊತ್ತಿಗೆ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಮೆಜೆಸ್ಟಿಕ್‌ನಲ್ಲಿ ಭೂಮಿಕಾ ಚಿತ್ರಮಂದಿರದಲ್ಲಿ ತೆರೆಕಾಣಲಿದೆ. ನಮಗೆಲ್ಲರಿಗೂ ಚಿತ್ರದ ಬಗ್ಗೆ ತೃಪ್ತಿ ಇದೆ. ಆದರೆ ಸಿನಿಮಾ ಬಿಡುಗಡೆಯಾದ ಮೇಲೆ ಪ್ರೇಕ್ಷಕರ ಅಭಿಪ್ರಾಯವೇ ಮುಖ್ಯವಾಗುತ್ತದೆ ಎಂದು ಗೊತ್ತು. ಅದಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ” ಎಂದರು.

ಸಂಗೀತ ನಿರ್ದೇಶಕ ಸುನೀಲ್ ಸಾಮ್ಯುಯೆಲ್ ಮಾತನಾಡಿ “ಚಿತ್ರದಲ್ಲಿ ರೊಮ್ಯಾಂಟಿಕ್ ಸಾಂಗ್, ಬ್ರೇಕಪ್ ಸಾಂಗ್, ಪ್ಯಾಥೊ ಸಾಂಗ್, ಎರಡು ಬಿಟ್ ಸಾಂಗ್ ಸೇರಿದಂತೆ ಒಟ್ಟು ಆರು ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ . ನೃತ್ಯ ನಿರ್ದೇಶಕ ಬಾಲು ಮಾಸ್ಟರ್ ತಾವು ಇದುವರೆಗೆ ನಲವತ್ತು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ‘ನಾನೊಂಥರ’ ಚಿತ್ರದಲ್ಲಿ ಎರಡು ಹಾಡುಗಳಿಗೆ ಕೊರಿಯಾಗ್ರಫಿ ಮಾಡಿದ್ದಾಗಿ ಹೇಳಿದರು. ಛಾಯಾಗ್ರಾಹಕ ಸುದೀಪ್ ಉಪಸ್ಥಿತರಿದ್ದರು.

Exit mobile version