ದೇಶದ ಏಕೈಕ‌ ಸಂಸ್ಕೃತ ಪತ್ರಿಕೆ “ಸುಧರ್ಮ” ಪತ್ರಿಕೆ ಸಂಪಾದಕ, ಪದ್ಮಶ್ರೀ ಪುರಸ್ಕೃತ ಸಂಪತ್ ಕುಮಾರ್ ಇನ್ನಿಲ್ಲ

ಮೈಸೂರು, ಜೂ. 30: ರಾಷ್ಟ್ರದ ಏಕೈಕ ಸಂಸ್ಕೃತ ಪತ್ರಿಕೆ “ಸುಧರ್ಮ” ಸಂಪಾದಕರಾದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೆ.ವಿ. ಸಂಪತ್ ಕುಮಾರ್(64) ಅವರು ಬುಧವಾರ ನಿಧನರಾದರು.

ದೇಶದ ಏಕಮಾತ್ರ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆ ಹೊಂದಿದ್ದ ಸುಧರ್ಮ ಪತ್ರಿಕೆ ಕಡಿಮೆ ಓದುಗರ ಬಳಗ, ಆರ್ಥಿಕವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಿತ್ತು. ಯಾವುದನ್ನು ಲೆಕ್ಕಿಸದೆ ಸಂಪತ್ ಕುಮಾರ್ ಅವರು ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತವನ್ನು ಸುಧರ್ಮ ಪತ್ರಿಕೆ ಮೂಲಕ ಜನರಿಗೆ ಪರಿಚಯಿಸುವ ಮಹತ್ತರ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದರು.

ಸುಧರ್ಮ ಬಗ್ಗೆ ಮಾಹಿತಿ
ಮೈಸೂರಿನ ಪಂಡಿತ್ ವರದರಾಜ ಅಯ್ಯಂಗಾರ್ ಈ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸಂಸ್ಕೃತ ವಿದ್ವಾಂಸರೂ ಆಗಿದ್ದ ಇವರು 1945ರಲ್ಲಿ ಸುಧರ್ಮ ಮುದ್ರಣಾಲಯ ಪ್ರಾರಂಭಿಸಿ ಪುಸ್ತಕಗಳು, ಸರ್ಕಾರಿ ಗೆಜೆಟ್ ಗಳು, ಸಂಸ್ಕೃತ ಮತ್ತು ಕನ್ನಡದ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸುತ್ತಿದ್ದರು. 1963 ರಲ್ಲಿ ಅವರು ಮೈಸೂರು ನಗರದಲ್ಲಿ ಬಾಲಕಿಯರ ಶಾಲೆ ಪ್ರಾರಂಭಿಸಿ ಅಲ್ಲಿ ಸಂಸ್ಕೃತ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದರು.

1970ರಲ್ಲಿ, ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಲು ಮತ್ತು ಅದನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸುಧರ್ಮ ಪತ್ರಿಕೆ ಪ್ರಾರಂಭಿಸಿದರು. ವರದರಾಜ ಅಯ್ಯಂಗಾರ್ ನಿಧನದ ನಂತರ ಸಂಪಾದಕ ಹುದ್ದೆ ವಹಿಸಿಕೊಂಡ ಕೆ.ವಿ. ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಜಯಲಕ್ಷ್ಮೀ ಅವರು ಪತ್ರಿಕೆಯನ್ನು ಈವರೆಗೆ ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದರು.

ಇಂದಿನ ಆಧುನಿಕತೆಯನ್ನು ಬಳಸಿಕೊಂಡು ಪತ್ರಿಕೆಯ ಆನ್ ಲೈನ್ ಆವೃತ್ತಿಯನ್ನು ಸಹ ತಂದಿದ್ದಾರೆ. ಸಂಪತ್ ಕುಮಾರ್ ತಮ್ಮ ತಂದೆಯ ಇಚ್ಚೆಯಂತೆ ಸಂಸ್ಕೃತ ಭಾಷೆಯನ್ನು ಪಸರಿಸುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ, ನಿರ್ವಹಿಸಿಕೊಂಡು ಬಂದಿದ್ದರು. ಇವರು ಸಂಸ್ಕೃತದ ಹಲವು ಮೊಟ್ಟ ಮೊದಲುಗಳನ್ನು ನಿರ್ಮಿಸಿದ್ದಾರೆ. ಮೊದಲ ಸಂಸ್ಕೃತ ದಿನದರ್ಶಿ ತರುವ ಜೊತೆಗೆ ಸುಧರ್ಮ ಎ3 ಗಾತ್ರದ ಎರಡು-ಪುಟ, ಐದು-ಕಾಲಂ ಪತ್ರಿಕೆಯಾಗಿಸಿದ್ದರು.

2009ರಲ್ಲಿ ಸುಧರ್ಮ ಪತ್ರಿಕೆಯ ಇ-ಪೇಪರ್ ಆವೃತ್ತಿ ಪ್ರಾರಂಭಿಸಿ ಜಗತ್ತಿನಾದ್ಯಂತ ಹಲವಾರು ಜನರು ಸಂಸ್ಕೃತ ಪತ್ರಿಕೆಯನ್ನು ಓದುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಪದ್ಮಶ್ರೀ ಪ್ರಶಸ್ತಿ ಗೌರವ
ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ ‘ಸುಧರ್ಮ’ ದಿನಪತ್ರಿಕೆಯ ಸೇವೆಯನ್ನು ಪರಿಗಣಿಸಿ 2 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಕೆ.ವಿ.ಸಂಪತ್ ಕುಮಾರ್- ಕೆ.ಎಸ್.ಜಯಲಕ್ಷ್ಮೀ ದಂಪತಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿದೆ. ಆದರೆ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಸಂಪತ್ ಕುಮಾರ್ ಅವರು ವಿಧಿವಶರಾದದ್ದು ಬೇಸರದ ವಿಷಯ.

Exit mobile version