ಸಿನಿ ಪ್ರೇಕ್ಷಕ ಕೊಟ್ಟ ಕಾಸಿಗೆ ಬೇಸರ ಮೂಡಿಸಿದ `ಏಕ್ ಲವ್ ಯಾ’ ; ಸಿನಿಮಾ ಹೇಗಿದೆ ಎಂಬುದರ ಸಂಪೂರ್ಣ ವಿಮರ್ಶೆ ಇಲ್ಲಿದೆ!

ಫೆ.24 ರಂದು ರಾಜ್ಯಾದ್ಯಂತ ಯಶಸ್ವಿಯಾಗಿ ಬಿಡುಗಡೆಗೊಂಡ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಬಿಡುಗಡೆಯಲ್ಲಿ ಕಂಡ ಯಶಸ್ಸನ್ನು ಸಿನಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿಲ್ಲ! ಕನ್ನಡ ಚಿತ್ರರಂಗದಲ್ಲಿ ಒಂದರ ಹಿಂದೆ ಒಂದು ಸಿನಿಮಾಗಳು ರಿಲೀಸ್ ಆಗುತ್ತಲ್ಲೇ ಇವೆ.

ಈ ಸಾಲಿನಲ್ಲಿ ಬಿಡುಗಡೆಗೊಂಡ ಏಕ್ ಲವ್ ಯಾ ಸಿನಿಮಾ ಟ್ರೇಲರ್ ಸಮಯದಲ್ಲಿ ಮಾಡಿದ್ದ ಸೌಂಡ್, ನಿರೀಕ್ಷೆ ಇಂದು ಸಿನಿಮಾ ಬಿಡುಗಡೆಯ ನಂತರದಲ್ಲಿ ಹುಸಿಯಾಗಿದೆ ಎಂಬುದು ಬೇಸರದ ಸಂಗತಿ! ಏಕ್ ಲವ್ ಯಾ ಸಿನಿಮಾ ಬಿಡಗಡೆಗೊಂಡಿದ್ದು ಈ ಸಿನಿಮಾ ಹೇಗಿದೆ ಎಂಬುದರ ಬಗ್ಗೆ ನನ್ನ ವಿಮರ್ಶೆ ಇಲ್ಲಿ ತಿಳಿಸಲಾಗಿದೆ ಮುಂದೆ ಓದಿ.

ಸಿನಿಮಾದಲ್ಲಿ ಬೇಸರ ಮೂಡಿಸಿದ ಅಂಶ :

ಏಕ್ ಲವ್ ಯಾ ಸಿನಿಮಾ ಫಸ್ಟ್ ಆಫ್ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸೋತಿದೆ. ಸೆಕೆಂಡ್ ಆಫ್ ನಲ್ಲಿ ಪ್ರೇಕ್ಷಕರಿಗೆ ಕಥೆಯಲ್ಲಿ ಒಂದಿಷ್ಟು ಟ್ವಿಸ್ಟ್ ಹಾಗೂ ಒಂದೊಳ್ಳೆ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಸಿನಿಮಾಗಳಲ್ಲಿ ಕೆಟ್ಟ ಡೈಲಾಗ್ ಗಳನ್ನು ಬಳಸಿದರೆ ಮಾತ್ರ ಸಿನಿಮಾ ಅದ್ಬುತವಾಗಿ ಜನರಿಗೆ ತಲುಪುತ್ತದೆ ಎಂಬ ನಂಬಿಕೆ ಹುಟ್ಟಿದೆ ಅನ್ಸುತ್ತೆ ಅದಕ್ಕಾಗಿಯೇ ಬೇಡದ ಡೈಲಾಗ್ ಗಳನ್ನು ಪ್ರೇಕ್ಷಕರಿಗೆ ಈ ಸಿನಿಮಾದಲ್ಲಿ ನೀಡಿದ್ದಾರೆ. ಅದು ನಿಜಕ್ಕೂ ಅವಶ್ಯಕತೆಯಿಲ್ಲ. ಇನ್ನು ನಟಿ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತಾರೆ ಎಂಬ ನಿರೀಕ್ಷೆಯಿತ್ತು. ಆದರೆ ರಚಿತಾ ಅವರಿಗೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಿಲ್ಲ!

ಆ ಪಾತ್ರವನ್ನು ರಚಿತಾ ಅವರೇ ನಟಿಸಬೇಕು ಎಂಬುದು ಇರಲಿಲ್ಲ, ಯಾರಾದರೂ ಹೊಸಬರು ಕೂಡ ನಟಿಸಬಹುದಿತ್ತು. ನಿರ್ದೇಶಕ ಪ್ರೇಮ್ ಅವರು ಈ ಸಿನಿಮಾದ ನಿರ್ದೇಶನದಲ್ಲಿ ಇನ್ನು ಹೆಚ್ಚು ವಿಶೇಷವನ್ನು ಕೊಡಬಹುದಿತ್ತು. ಚಿತ್ರಕಥೆಯಯನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಸಿನಿಮಾ ಅಕ್ಷರಶಃ ಸೋತಿದೆ ಎಂಬುದು ಸ್ಪಷ್ಟ! ಕಾಸು ಕೊಟ್ಟು ನಿರೀಕ್ಷೆ ಇಟ್ಟುಕೊಂಡು ನೋಡುವಂತ ಸಿನಿಮಾ ಇದಲ್ಲ. ಅತೀ ಮುಖ್ಯವಾಗಿ ಕುಟುಂಬ ಸಮೇತ ವೀಕ್ಷಿಸುವಂತ ಸಿನಿಮಾ ಖಂಡಿತ ಅಲ್ಲ!

ಸಿನಿಮಾದಲ್ಲಿ ಗಮನಾರ್ಹ ಅಂಶ ಯಾವುದು?

ಏಕ್ ಲವ್ ಯಾ ಸಿನಿಮಾ ಪ್ರಾರಂಭದ ಮೊದಲು ನಟ ರಾಣಾ ಅವರ ಎರಡು ಶೇಡ್ ಗಳು ಪ್ರೇಕ್ಷಕರನ್ನು ರಂಜಿಸುತ್ತದೆ. ರಾಣಾ ಅವರ ನಟನೆ, ಡೈಲಾಗ್ ಡಿಲಿವರಿ, ಸ್ಟಂಟ್ಸ್ ನಿಜಕ್ಕೂ ಮೊದಲ ಬಾರಿಗೆ ನಟನೆ ಮಾಡಿರುವಂತದ್ದು ಎಂದು ಅನಿಸೋದಿಲ್ಲ. ಅಷ್ಟು ಅದ್ಬುತವಾಗಿ ನಟಿಸಿದ್ದಾರೆ. ರಾಣಾಗೆ ಜೊತೆಯಾಗಿ ಹೊಸ ನಟಿ ರೀಷ್ಮಾ ನಾನಯ್ಯ ಕೂಡ ಸೊಗಸಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು, ನಟನೆ, ನೃತ್ಯಗಳಲ್ಲಿ ಪ್ರೇಕ್ಷಕರ ಕಣ್ಣೊಳಗೆ ಬಂದು ಕುಳಿತುಕೊಳ್ಳುತ್ತಾರೆ. ಇಬ್ಬರ ಅಭಿನಯ ಕೂಡ ಹೊಸತು ಎಂಬುದು ಎಲ್ಲಿಯೂ ಕೂಡ ತಿಳಿಯಲ್ಲ ಅಷ್ಟು ಚೆನ್ನಾಗಿ ಇಬ್ಬರು ನಟನೆಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ.

ಈ ಸಿನಿಮಾದಲ್ಲಿ ಒಟ್ಟು 6 ಹಾಡುಗಳು ಇದ್ದು, ಅರ್ಜುನ್ ಜನ್ಯ ಅವರು ಸಂಯೋಜಿಸಿರುವ ಸಂಗೀತ ಒಂದೊಂದು ಹಾಡು ಒಂದಕ್ಕಿಂತ ಒಂದು ಅದ್ಬುತವಾಗಿದೆ. ಅದರಲ್ಲೂ ಕೇಳಲು ಎಷ್ಟು ಇಂಪಾಗಿದೆಯೋ ತೆರೆಮೇಲೆ ದೃಶ್ಯವನ್ನು ವೀಕ್ಷಿಸಲು ಅಷ್ಟೇ ಕಣ್ಣಿಗೆ ತಂಪಾಯಿತು. ಇನ್ನು ಬಹಳ ವರ್ಷಗಳ ನಂತರ ನಟ ಚರಣ್ ರಾಜ್ ಅವರನ್ನು ಲಾಯರ್ ಪಾತ್ರದಲ್ಲಿ ಕಾಣಲು ಖುಷಿಯಾಯಿತು. ತಮ್ಮ ಪಾತ್ರವನ್ನು ಚರಣ್ ರಾಜ್ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಛಾಯಾಗ್ರಹಣ ಕೆಲಸಗಳು ಚೆನ್ನಾಗಿ ಮೂಡಿಬಂದಿದೆ.

ಸಿನಿಮಾ ಅಂತ್ಯವಾಗುವ ಕಡೆ 20 ನಿಮಿಷಗಳು ಮಾತ್ರ ಸಸ್ಪೆನ್ಸ್, ಒಳ್ಳೆಯ ಸಂದೇಶವನ್ನು ತಲುಪಿಸುವ ನಿಟ್ಟಿನಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ನಾನು ಕೊಟ್ಟ ವಿಮರ್ಶೆ ಮೇಲೆ ನೀವು ನಿರ್ಧರಿಸಬೇಡಿ. ಖುದ್ದಾಗಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿ ತದನಂತರ ನಿರ್ಧರಿಸಿ!

ಕನ್ನಡಿಗರಲ್ಲಿ ಮನವಿ : “ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ವೀಕ್ಷಿಸಿ ವಿನಃ ಪೈರಸಿಯಲ್ಲಿ ಬಂದ ಲಿಂಕ್ ಅಥವಾ ಓಟಿಟಿ ರಿಲೀಸ್‍ಗೆ ಕಾಯಬೇಡಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸುವ ಮೂಲಕ ಆಯಾ ಸಿನಿಮಾದ ನಟ, ನಟಿ, ತಂತ್ರಜ್ಞರು ಸೇರಿದಂತೆ ತೆರೆ ಹಿಂದಿನ ತಂತ್ರಜ್ಞರು, ಲೈಟ್ ಬಾಯ್ಸ್ ಎಲ್ಲರ ಶ್ರಮಕ್ಕೆ ಪ್ರೋತ್ಸಾಹ ನೀಡಿದಂತೆಯೇ ಸರಿ”.

Exit mobile version