`ಮೋಕ್ಷ’ ಟ್ರೇಲರ್‌ಗೆ ಗಣ್ಯರ ಮೆಚ್ಚುಗೆ

ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಆದರೆ ವಿಭಿನ್ನ ಕಥೆ ಒಳಗೊಂಡಿರುವ “ಮೋಕ್ಷ” ಚಿತ್ರದ ಟ್ರೇಲರ್ ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಕಿಚ್ಚ ಸುದೀಪ, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ನಿರ್ದೇಶಕರಾದ ಯೋಗರಾಜ್ ಭಟ್, ಸಿಂಪಲ್ ಸುನಿ, ನಟ ರಿಶಿ‌ ಮೊದಲಾದ ಗಣ್ಯರು ಚಿತ್ರದ ಟ್ರೇಲರ್ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಚಿತ್ರದ ನಿರ್ದೇಶಕ ಸಮರ್ಥ್ ನಾಯಕ್ “ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ನಮ್ಮ ಚಿತ್ರ ತಾಂತ್ರಿಕವಾಗಿ ಅದ್ದೂರಿತನದಿಂದ ಮೂಡಿಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ತಂತ್ರಜ್ಞರು. ಟ್ರೇಲರ್ ಬಗ್ಗೆ ಚಿತ್ರರಂಗದ ಗಣ್ಯರು ಹಾಗೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏಪ್ರಿಲ್ 16ರಂದು `ಮೋಕ್ಷ’ ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.‌ ಕನ್ನಡ ಸಿನಿರಸಿಕರು ನಮ್ಮ ಚಿತ್ರ ವೀಕ್ಷಿಸಿ, ಪ್ರೋತ್ಸಾಹಿಸಿ” ಎಂದಿದ್ದಾರೆ. ಸಮರ್ಥ್ ನಾಯಕ್ ಈ ಚಿತ್ರದ ನಿರ್ಮಾಪಕರೂ ಹೌದು. ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ನಾಯಕ ಮೋಹನ್ ಧನರಾಜ್ ಅವರಿಗೆ ಇದು ಕನ್ನಡದಲ್ಲಿ ಚೊಚ್ಚಲ ಚಿತ್ರ.

ನಾಯಕಿಯಾಗಿ ಕಾಣಿಸಿಕೊಂಡಿರುವ ಆರಾಧ್ಯ ಲಕ್ಷ್ಮಣ್ ಅವರು ತಮ್ಮ ಪಾತ್ರದ ಬಗ್ಗೆ ಸಂತೃಪ್ತಿಯ ಮಾತುಗಳಾಡಿದರು. ಈಗಾಗಲೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ, ತಾರಕ್ ಪೊನ್ನಪ್ಪ ಮೋಕ್ಷದಲ್ಲಿ ಪೊಲೀಸ್ ತನಿಖಾಧಿಕಾರಿಯ ಪಾತ್ರ ಮಾಡಿದ್ದಾರೆ. ಚಿತ್ರವನ್ನು ಕರುನಾಡ ಹಾಗೂ ಗೋವಾದ ಸುಂದರಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ‌ ಎಂದು ಹೇಳುತ್ತಾ, ಈ ಚಿತ್ರದಲ್ಲಿ ಮಾಸ್ಕ್ ಮ್ಯಾನ್ ಎಂಬ ಪಾತ್ರವೊಂದಿದೆ. ಮಾಸ್ಕ್ ಮ್ಯಾನ್ ನಿಂದ ನಾಯಕ, ನಾಯಕಿ ಬಹಳ ತೊಂದರೆ ಅನುಭವಿಸುತ್ತಿರುತ್ತಾರೆ.
ಈ ವಿಷಯ ತಿಳಿದು ಪೊಲೀಸ್ ಅಧಿಕಾರಿ ಪಾತ್ರಧಾರಿಯಾದ ನಾನು ಅಖಾಡಕ್ಕೆ ಇಳಿಯುತ್ತೇನೆ ಎಂದು ತಾರಕ್ ಪೊನ್ನಪ್ಪ ಹೇಳಿದರು. ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ಅವರದು. ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ವರುಣ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.
ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ.

Exit mobile version