ಬುಮ್ರಾ–ಶಮಿ ದಾಳಿಗೆ ತತ್ತರಿಸಿದ ಇಂಗ್ಲೆಂಡ್; ಮೊದಲ ಇನ್ನಿಂಗ್ಸ್ ನಲ್ಲಿ 183ಕ್ಕೆ ಆಲೌಟ್‌

ನಾಟಿಂಗ್ಹ್ಯಾಮ್, ಆ. 05: ಭಾರತೀಯ ಬೌಲರ್‌ಗಳ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ತತ್ತರಿಸಿದ ಅತಿಥೇಯ ಇಂಗ್ಲೆಂಡ್, ಕೇವಲ 183 ರನ್ ಗಳಿಗೆ ಆಲೌಟ್ ಆಗುವ ಮೂಲಕ ಆಘಾತ ಅನುಭವಿಸಿದೆ.

ಟ್ರೆಂಟ್ ಬ್ರಿಡ್ಜ್ ನಲ್ಲಿ ಬುಧವಾರ ಆರಂಭಗೊಂಡ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ಬೌಲರ್‌ಗಳು ಪ್ರಾಬಲ್ಯ ಮೆರೆದರು. ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ(46ಕ್ಕೆ4) ಹಾಗೂ ಮೊಹಮ್ಮದ್ ಶಮಿ (28ಕ್ಕೆ3) ಆಟಕ್ಕೆ ತತ್ತರಿಸಿದ ಇಂಗ್ಲೆಂಡ್ 65.4 ಓವರ್‌ಗಳಲ್ಲಿ 183 ರನ್ ಗಳಿಸಿ ಆಲೌಟ್ ಆಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಲೆಕ್ಕಾಚಾರವನ್ನ ಭಾರತದ ಬೌಲರ್ಗಳು ಹುಸಿಗೊಳಿಸಿದರು.
ಇನ್ನಿಂಗ್ಸ್ ಮೊದಲ ಓವರ್‌ನಲ್ಲೇ ಮಿಂಚಿದ ಬುಮ್ರಾ, ಇಂಗ್ಲೆಂಡ್ ಆರಂಭಿಕ ಬ್ಯಾಟ್ಸಮನ್ ರೋರಿ ಬರ್ನ್ಸ್‌ ಅವರಿಗೆ ಪೆವಿಲಿಯನ್ ದಾರಿ ತೋರಿದರು. ಬಳಿಕ 2ನೇ ವಿಕೆಟ್ಗೆ ಜೊತೆಯಾದ ಡ್ಯಾಮ್ ಸಿಬ್ಲಿ(18) ಹಾಗೂ ಜ್ಯಾಕ್ ಕ್ರಾಲಿ (27) ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಇವರನ್ನ ಶಮಿ ಹಾಗೂ ಸಿರಾಜ್ ಪೆವಿಲಿಯನ್ಗೆ ಅಟ್ಟಿದರು. ಪರಿಣಾಮ 66 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು.

ರೂಟ್ ಅರ್ಧಶತಕ
ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾದರು. ಭಾರತೀಯ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ರೂಟ್(64 ರನ್) ಆಕರ್ಷಕ ಅರ್ಧಶತಕ ಗಳಿಸಿ ಮಿಂಚಿದರು. ಇವರಿಗೆ ಸಾಥ್ ನೀಡಿದ ಜಾನಿ ಬೈರ್ಸ್ಟೋ(29) ರನ್ ಗಳಿಸಿದರು. ಪರಿಣಾಮ 4ನೇ ವಿಕೆಟ್ ಜೊತಯಾಟದಲ್ಲಿ 72 ರನ್ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಈ ಇಬ್ಬರು, ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿ ಹೊರನಡೆದರು.

ರೂಟ್ ಹಾಗೂ ಬೈರ್ಸ್ಟೋ ವಿಕೆಟ್ ಪತನದ ಬಳಿಕ ಬಂದ ಯಾರೊಬ್ಬರು ಹೆಚ್ಚುಹೊತ್ತು ಕಣದಲ್ಲಿರಲಿಲ್ಲ. ಆದರೆ ಇನ್ನಿಂಗ್ಸ್ ಕೊನೆಯಲ್ಲಿ ಬಿರುಸಿನ ಆಟವಾಡಿದ ಸ್ಯಾಮ್ ಕರನ್ (ಅಜೇಯ 29) ರನ್ ಗಳಿಸಿ ತಂಡದ ಮೊತ್ತವನ್ನ 150ರ ಗಡಿದಾಟುವಂತೆ ಮಾಡಿದರು. ಭಾರತದ ಪರ ಬುಮ್ರಾ 4 ವಿಕೆಟ್ ಪಡೆದರೆ, ಶಮಿ 3, ಶಾರ್ದೂಲ್ 2 ಹಾಗೂ ಸಿರಾಜ್ 1 ವಿಕೆಟ್ ಕಬಳಿಸಿದರು.

ಭಾರತಕ್ಕೆ ಎಚ್ಚರಿಕೆ ಆರಂಭ ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಮೊತ್ತಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ, ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 21 ರನ್‌ ಗಳಿಸಿದೆ. ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ(9) ಹಾಗೂ ಕೆ.ಎಲ್.ರಾಹುಲ್(9) ಎಚ್ಚರಿಕೆ ಆಟವಾಡಿದರು.

Exit mobile version