ಇಂಗ್ಲೆಂಡ್‌ನಿಂದ ದೆಹಲಿಗೆ ಬಂದಿಳಿದ 256 ಪ್ರಯಾಣಿಕರು

ನವದೆಹಲಿ, . 08: ಇದೀಗ ದೇಶ ವ್ಯಾಪಿ ಹರಡುತ್ತಿರುವ ಇಂಗ್ಲೆಂಡಿನ ರೂಪಾಂತರ ಕೊರೋನಾ ವೈರಸ್​​ ಆತಂಕವನ್ನೆ ಸೃಷ್ಟಿಸಿದೆ. ಈ ಅಪಾಯಕಾರಿ ವೈರಸ್​​ ನಿಯಂತ್ರಿಸಲು ಭಾರತ ಸೇರಿ ಅನೇಕ ದೇಶಗಳಲ್ಲಿ ಇಂಗ್ಲೆಂಡ್​ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿತ್ತು.

ಇಂಗ್ಲೆಂಡ್​ನಲ್ಲಿ ಮ್ಯೂಟಂಟ್ ಕೊರೋನಾ ವೈರಸ್​ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಮಾನ ಸಂಚಾರದ ಮೇಲೆ ನಿನ್ನೆಯವರೆಗೆ ನಿರ್ಬಂಧ ವಿಧಿಸಲಾಗಿತ್ತು. ಇಂದಿನಿಂದ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಭಾರತದಲ್ಲಿ ದಿನದಿಂದ ದಿನಕ್ಕೆ ರೂಪಾಂತರಿ ಕೊರೋನಾ ಕೇಸ್​ಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇಂದು ಇಂಗ್ಲೆಂಡ್​ನಿಂದ 256 ಪ್ರಯಾಣಿಕರನ್ನು ಹೊತ್ತು ತಂದ ಏರ್ ಇಂಡಿಯಾ ವಿಮಾನ ದೆಹಲಿಗೆ ತಲುಪಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಲಂಡನ್​ನ ಹೀಥ್ರೋ ವಿಮಾನ ನಿಲ್ದಾಣದಿಂದ ಇಂದಿರಾಗಾಂಧಿ ಇಂಟರ್​ ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ 256 ಪ್ರಯಾಣಿಕರಿದ್ದರು.

ಇಂಗ್ಲೆಂಡ್​ನಲ್ಲಿ ರೂಪಾಂತರ ಕೊರೋನಾ ಕೇಸ್​ಗಳು ವ್ಯಾಪಕವಾಗಿ ಹರಡತೊಡಗಿದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಡಿ. 23ರಿಂದ ಇಂಗ್ಲೆಂಡ್-ಭಾರತ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ದೆಹಲಿಗೆ ಇಂದು ಆಗಮಿಸಿರುವ ಪ್ರಯಾಣಿಕರು 10 ಗಂಟೆಗಳ ಕಾಲ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಬಳಿಕ ಅವರನ್ನು ಕ್ವಾರಂಟೈನ್ ಆಗಲು ದೆಹಲಿ ಸರ್ಕಾರ ಸೂಚಿಸಿದೆ. ಹಾಗೇ, ಮುನ್ನೆಚ್ಚರಿಕಾ ಕ್ರಮವಾಗಿ ಜನವರಿ 31ರವರೆಗೆ ಇಂಗ್ಲೆಂಡ್​ನ ವಿಮಾನಗಳ ಸಂಚಾರಕ್ಕೆ ನಿರ್ಬಂಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

Exit mobile version