ಆಂಗ್ಲರ ಆರ್ಭಟ, ಪರದಾಡಿದ ಭಾರತ; 2ನೇ ಏಕದಿನ ಇಂಗ್ಲೆಂಡ್‌ಗೆ ಜಯ: ಸರಣಿ ಸಮಬಲ

ಪುಣೆ, ಮಾ. 27: ಆರಂಭಿಕ ಆಟಗಾರ ಜಾನಿ ಬೇರ್ಸ್ಟೋ(124) ಶತಕ ಹಾಗೂ ಬೆನ್ ಸ್ಟೋಕ್ಸ್(99) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ 6 ವಿಕೆಟ್‌ಗಳ ಗೆಲುವು ಸಾಧಿಸಿತು.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ.  ಆರಂಭಿರಾದ ರೋಹಿತ್ ಶರ್ಮಾ(25) ಹಾಗೂ ಶಿಖರ್ ಧವನ್(4) ಬಹುಬೇಗನೆ ಕಳೆದುಕೊಂಡ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ(66) ಹಾಗೂ ಕೆ.ಎಲ್.ರಾಹುಲ್‌ (108) ಉತ್ತಮ ಜತೆಯಾಟದ ಮೂಲಕ ಚೇತರಿಕೆ ನೀಡಿದರು.

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ ಶತಕ ಸಿಡಿಸಿ ಮಿಂಚಿದ್ದಾರೆ‌. ವಿಕೆಟ್ ಕೀಪರ್‌ ರಿಷಭ್ ಪಂತ್‌(77) ಸ್ಟೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರಲ್ಲದೆ, ತಂಡದ ಮೊತ್ತ ಮುನ್ನೂರರ ಗಡಿ ದಾಟಿಸಿದರು. ಕೊನೆಯಲ್ಲಿ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ(35) ಉಪಯುಕ್ತ ಕಾಣಿಕೆ ನೀಡುವ ಮೂಲಕ ಟೀಂ ಇಂಡಿಯಾ 50 ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 336 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ, ಇಂಗ್ಲೆಂಡ್‌ ತನ್ನ ಎಂದಿನ ಸ್ಪೋಟಕ ಆಟದ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಜಾನಿ ಬೆಸ್ಟೊ(124) ಜೇಸನ್ ರಾಯ್(55) ಶತಕದ ಆರಂಭ ಒದಗಿಸಿದರು. ಟೀಂ ಇಂಡಿಯಾ ಬೌಲರ್ ಮೇಲೆ ಸವಾರಿ ಮಾಡಿದ ಬೇರ್ಸ್ಟೋ ಅಬ್ಬರದ ಶತಕ ಸಿಡಿಸಿ ಮಿಂಚಿದರು. 2ನೇ ವಿಕೆಟ್ ಜೊತೆಯಾಟದಲ್ಲಿ ಇವರಿಗೆ ಉತ್ತಮ ಸಾಥ್ ನೀಡಿದ ಬೆನ್ ಸ್ಟ್ರೋಕ್ಸ್(99) ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು.

ಅಗ್ರ ಕ್ರಮಾಂಕದ ಆಟಗಾರರ ಜವಾಬ್ದಾರಿಯುವ ಆಟದಿಂದ ಪಂದ್ಯವನ್ನು ತನ್ನ ಹಿಡಿತಕ್ಕೆ ಪಡೆದ ಇಂಗ್ಲೆಂಡ್, ಅಂತಿಮವಾಗಿ ಇಂಗ್ಲೆಂಡ್‌ 43.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು. ಉಭಯ ತಂಡಗಳ ನಡುವಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಮಾ.29ಕ್ಕೆ ನಡೆಯಲಿದೆ. ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ ಗುರಿ ತಲುಪುವಲ್ಲಿ ಇಂಗ್ಲೆಂಡ್ ತಂಡಕ್ಕೆ ನೆರವಾದ ಜಾನಿ ಬೇರ್‌ಸ್ಟೋ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

Exit mobile version