‘ವೀರಶೈವ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಿ’ : ಕೇಂದ್ರಕ್ಕೆ ಈಶ್ವರ್ ಖಂಡ್ರೆ ಒತ್ತಾಯ!

Eshwar

12ನೇ ಶತಮಾನದಲ್ಲೇ ಜಗತ್ತಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನೀಡಿದವರು ಬಸವಾದಿ ಶರಣರು. ಆದರೆ ಇಂದು ಬಸವತತ್ವ ಅನುಯಾಯಿಗಳಾದ ವೀರಶೈವ ಲಿಂಗಾಯತರೇ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ.

ಹೀಗಾಗಿ ಸರ್ಕಾರಗಳು ಸಂವಿಧಾನ(Constitution) ಬದ್ದವಾದ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ(Eshwar Khandre) ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮಹಾಸಭಾದ ‘ಪ್ರಾತಿನಿಧಿಕ ಸಭೆ’ಯಲ್ಲಿ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ವೀರಶೈವ ಲಿಂಗಾಯತ ಸಮುದಾಯವಿದೆ. ಕರ್ನಾಟಕದಲ್ಲಿ ಸುಮಾರು ಶೇಕಡಾ 18-20ರಷ್ಟು ಜನರಿದ್ದಾರೆ.

ಆದರೆ ನಮ್ಮ ಸಮುದಾಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಹೀಗಾಗಿ ಕೇಂದ್ರ ಸರ್ಕಾರ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು. ವೀರಶೈವ ಲಿಂಗಾಯತ ಸಮುದಾಯ ಮುಂದುವರೆದಿದೆ ಎಂದು ಕೆಲವರು ವಾದಿಸುತ್ತಾರೆ. ಆದರೆ ಅದು ಶುದ್ದ ಸುಳ್ಳು. ನಮ್ಮ ಸಮುದಾಯ ಸಾಕಷ್ಟು ಹಿಂದುಳಿದಿದೆ. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಲ್ಲದ ಕಾರಣ ಬ್ಯಾಕಿಂಗ್, ರೈಲ್ವೆ, ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿದೆ.

ಅಲ್ಲದೇ ಐಐಟಿ, ಐಐಎಂ, ಐಐಎಸ್ಸಿ ಸೇರಿದಂತೆ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಾತಿಯಲ್ಲಿಯೂ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಇನ್ನು ವೀರಶೈವ ಲಿಂಗಾಯತರಲ್ಲಿ 90 ಉಪಪಂಗಡಗಳಿವೆ. ಆದರೆ ಕೇಂದ್ರ ಸರ್ಕಾರ ಕೇವಲ 14 ಉಪಪಂಗಡಗಳನ್ನು ಮಾತ್ರ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿದೆ. ಹೀಗಾಗಿ ಉಳಿದ ಉಪಪಂಗಡಗಳಿಗೆ ಅನ್ಯಾಯವಾಗುತ್ತಿದೆ.

ಹೀಗಾಗಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲ 90 ಉಪಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಮನವಿ ಮಾಡಿದರು.

Exit mobile version