ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದ ಈಶ್ವರಪ್ಪ ಯಾರಿಗೆ ನಿಷ್ಠರು: ಡಿ.ಕೆ.ಶಿವಕುಮಾರ್

ಬೆಂಗಳೂರು, ಎ. 02: ನಾನು ರೆಬಲ್ ಅಲ್ಲ, ಲಾಯಲ್ ಎಂಬ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಟಾಂಗ್ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ಶಿವಕುಮಾರ್, ಈಶ್ವರಪ್ಪ ಅವರು ಯಾರಿಗೆ ನಿಷ್ಠರು? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಮುಖ್ಯಮಂತ್ರಿಗಳ ವಿರುದ್ಧವೇ ಸಿಡಿದೆದ್ದು, ರಾಜ್ಯಪಾಲರಿಗೆ ಪತ್ರ ಬರೆದ ಮೇಲೆ ಅವರು ಯಾರಿಗೆ ನಿಷ್ಠೆ ತೋರುತ್ತಿದ್ದಾರೆ? ಇಲ್ಲಿರುವವರೆಲ್ಲ ಚಿಕ್ಕ ಮಕ್ಕಳೇ? ಸಾಮಾನ್ಯ ಪ್ರಜ್ಞೆ ಇರುವ ಹಳ್ಳಿ ಜನರಿಗೂ ಇದರ ಬಗ್ಗೆ ಅರ್ಥವಾಗುತ್ತದೆ. ಸಿಎಂ ವಿರುದ್ಧ ಬೇಸತ್ತು, ಎಲ್ಲ ಕಾನೂನು ನಿಯಮಗಳನ್ನು ನಮೂದಿಸಿ ರಾಜ್ಯಪಾಲರಿಗೆ ಪತ್ರ ಬರೆದು ಅವರು ಅವರ ಪಕ್ಷಕ್ಕೆ ನಿಷ್ಠರಿರಬಹುದು. ಆದರೆ ಮುಖ್ಯಮಂತ್ರಿಗಳಿಗೆ ನಿಷ್ಠೆ ತೋರುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೇ, ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗ ಈ ಪರಿಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದರು? ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಅವಕಾಶ ಕೊಟ್ಟಿರುವವರು ಯಾರು? ಅವರೇ ಪತ್ರ ಬರೆದು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈಶ್ವರಪ್ಪ ಯಾರಿಗೆ ನಿಷ್ಠರಾಗಿದ್ದಾರೆ? ಸಂವಿಧಾನದ ವ್ಯಾಪ್ತಿಯಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಅವರಿಗೆ ಪ್ರಮಾಣವಚನ ಬೋಧಿಸಿದ್ದಾರೆ. ಹೀಗಾಗಿ ಇಲ್ಲಿ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದೆ. ಮುಖ್ಯಮಂತ್ರಿಗಳು ಯಾಕೆ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸದೇ ಸುಮ್ಮನೆ ಕೂತಿದ್ದಾರೆ? ಆ ಮೂಲಕ ಮುಖ್ಯಮಂತ್ರಿಗಳೇ ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ಗುಂಪುಗಾರಿಕೆಯಾದರೂ ಮಾಡಿಕೊಳ್ಳಲಿ, ಏನಾದರೂ ಮಾಡಿಕೊಳ್ಳಲಿ. ಈಗಾಗಲೇ ಅವರು ಸಹಿ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಇದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅವರು ಏನುಬೇಕಾದರೂ ಮಾಡಿಕೊಳ್ಳಲಿ ಎಂದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಶಾಸಕರುಗಳು ಮಾತನಾಡಿದ್ದನ್ನು ಮೊದಲು ಇಡಿ, ಐಟಿಗೆ ಕಳುಹಿಸಿಕೊಡಲಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಇದೇ ವೇಳೆ‌ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯವಾಗಬೇಕು. ಅದನ್ನು ಬಿಟ್ಟು ತಮಗೆ ಬೇಕಾದಾಗ ಮಾರ್ಗಸೂಚಿ ಬಿಡುಗಡೆ ಮಾಡಿ ಬೇಡವಾದಾಗ ಅದನ್ನು ಸಡಿಲ ಮಾಡಬಾರದು. ಆ ರೀತಿ ಮಾಡಿದರೆ ನಾವು ರಾಜಕೀಯ ಹೋರಾಟ ಮಾಡುತ್ತೇವೆ. ಸರ್ಕಾರ ಮಾರ್ಗಸೂಚಿ ಮಾಡಲಿ, ಅದು ಅವರಿಗೂ ಹಾಗೂ ಎಲ್ಲರಿಗೂ ಅನ್ವಯವಾಗುವಂತೆ ಮಾಡಲಿ. ಅವರಿಗೆ ಬೇಕಾದವರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಗಸೂಚಿ ಮಾಡುವುದು ಬೇಡ. ಇದು ಪ್ರಜಾಪ್ರಭುತ್ವದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನವಾಗಿದೆ.

ಜನರ ಸುರಕ್ಷತೆ ಹಾಗೂ ಒಳ್ಳೆಯದಕ್ಕಾಗಿ ಕಾನೂನು ಮಾಡಲಿ, ನಾವು ಬೇಡ ಎನ್ನುವುದಿಲ್ಲ. ಆ ಕಾನೂನನ್ನು ಎಲ್ಲರೂ ಪಾಲಿಸಬೇಕು. ಅವರಿಗೆ ಬೇಕಾದಾಗ ಕಾನೂನು ಸಡಿಲ ಮಾಡುವುದು ಬೇಕಾದಾಗ ಕಠಿಣ ಮಾಡುವುದು ಸರಿಯಲ್ಲ. ಆ ರೀತಿ ಮಾರ್ಗಸೂಚಿ ಮಾಡಿದರೆ ನಾವು ನಮ್ಮದೇ ರಾಜಕೀಯ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

Exit mobile version