“ನಮ್ಮ ಮೆಸ್ ಊಟವನ್ನು ಪ್ರಾಣಿಗಳೂ ಸಹ ತಿನ್ನಲು ಸಾಧ್ಯವಿಲ್ಲ”; ಕಣ್ಣೀರಿಟ್ಟ ಪೇದೆ, ವೀಡಿಯೋ ವೈರಲ್

UP

ಉತ್ತರ ಪ್ರದೇಶದಲ್ಲಿ(UttarPradesh) ಪೊಲೀಸ್ ಪೇದೆಯೊಬ್ಬರು(Police Constable) ಪೊಲೀಸ್ ಮೆಸ್‍ನಲ್ಲಿ ನೀಡಲಾದ ಆಹಾರ ಗುಣಮಟ್ಟ ಕಳಪೆಯಾಗಿದೆ ಎಂದು ರಸ್ತೆಯಲ್ಲಿ ನಿಂತು ಗಳಗಳನೇ ಅಳುತ್ತಿರುವ ವೀಡಿಯೋ(Video) ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್(Viral) ಆಗುತ್ತಿದೆ.


ಫಿರೋಜಾಬಾದ್(Firozabad) ಜಿಲ್ಲೆಗೆ ನಿಯೋಜಿತರಾದ ಯುಪಿಯ ಕಾನ್ಸ್ಟೇಬಲ್ ಮನೋಜ್ ಕುಮಾರ್, ಕೈಯ್ಯಲ್ಲಿ ಆಹಾರದ ತಟ್ಟೆ ಹಿಡಿದು, ಫಿರೋಜಾಬಾದ್ ಪೊಲೀಸ್ ಲೈನ್ಸ್ ಮುಂಭಾಗದ ಹೆದ್ದಾರಿಯಲ್ಲಿ ಬುಧವಾರ ಪ್ರತಿಭಟಿಸಿದ್ದಾರೆ. ಮನೋಜ್ ಕುಮಾರ್ ಅವರು ರೊಟ್ಟಿ, ದಾಲ್ ಹಾಗೂ ಅನ್ನವನ್ನು ತಟ್ಟೆಯಲ್ಲಿ ಹಿಡಿದು ದಾರಿಹೋಕರಿಗೆ ತೋರಿಸುತ್ತಾ, ಈ ಊಟವನ್ನು ಪ್ರಾಣಿಗಳು ಸಹ ತಿನ್ನುವುದಿಲ್ಲ ಎಂದು ಗದ್ಗದಿತರಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.


“ಪೊಲೀಸ್ ಲೈನ್ ಮೆಸ್ ನಲ್ಲಿ ಪೊಲೀಸರಿಗೆ ಕಡಿಮೆ ಗುಣಮಟ್ಟದ ಆಹಾರವನ್ನು ಪೂರೈಸಲಾಗುತ್ತಿದೆ. ಎರಡು ದಿನಗಳಿಂದ ಹಸಿವಿನಿಂದ ಬಳಲುತ್ತಿದ್ದರೂ, ಯಾವುದೇ ಅಧಿಕಾರಿ ಗಮನ ಹರಿಸುತ್ತಿಲ್ಲ. ಆಹಾರದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲದೇ ನನ್ನನ್ನು ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ದಾರಿಹೋಕರ ಬಳಿ ಮನೋಜ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.


ಈ ಸಂದರ್ಭದಲ್ಲಿ ಗದ್ಗದಿತರಾದ ಮನೋಜ್ “ಪೊಲೀಸ್ ಅಧಿಕಾರಿಗಳಿಗೆ ಪೌಷ್ಟಿಕ ಆಹಾರ ನೀಡಲು ರಾಜ್ಯ ಸರ್ಕಾರ(State Government) ಭತ್ಯೆ ನೀಡುತ್ತಿದೆ ಎಂದು ಯೋಗಿ ಆದಿತ್ಯನಾಥ್(Yogi Adityanath) ಈ ಹಿಂದೆ ಘೋಷಿಸಿದ್ದರು. ಆದರೂ ನಮಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ನಾವು ಸರಿಯಾದ ಆಹಾರವನ್ನು ಪಡೆಯದಿದ್ದರೆ, ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಷಯ ತಿಳಿದ ತಕ್ಷಣ ಇನ್ಸ್ಪೆಕ್ಟರ್ ಆದೇಶದ ಮೇರೆಗೆ, ಕಾನ್ಸ್ಟೇಬಲ್ ಮನೋಜ್ ಅವರನ್ನು ತಕ್ಷಣವೇ ಬಲಪ್ರಯೋಗದ ಮೂಲಕ ಪೊಲೀಸ್ ಲೈನ್ ಗೆ ಕರೆತರಲಾಯಿತು ಎನ್ನಲಾಗಿದೆ. ಸದ್ಯ, ಈ ಪ್ರಕರಣದ ಕುರಿತು ವಿಚಾರಣೆ ನಡೆಸಲು ಎಸ್ಎಸ್ಪಿ, ಸಿಒ ಲೈನ್ ಹೀರಾಲಾಲ್ ಕನೋಜಿಯಾ ಅವರಿಗೆ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

Exit mobile version