ಅಸ್ಸಾಂ ಬಿಜೆಪಿ ಶಾಸಕನ ಕಾರಲ್ಲಿ ಇವಿಎಂ ಪತ್ತೆ; ಸ್ಥಳೀಯರಿಂದ ಹಿಂಸಾಚಾರ

ಗುವಾಹಟಿ, ಎ. 02: ಮತದಾನ ನಡೆದ ದಿನವೇ ಮತಯಂತ್ರವೊಂದು ಬಿಜೆಪಿ ಶಾಸಕರೊಬ್ಬರಿಗೆ ಸೇರಿದ ಕಾರಿನಲ್ಲಿ ಪತ್ತೆಯಾದ ಘಟನೆ ಅಸ್ಸಾಮ್​ನ ಕರೀಮ್​ಗಂಜ್​ನಲ್ಲಿ ನಡೆದಿದೆ. ಬಿಜೆಪಿ ಶಾಸಕ ಕೃಷ್ಣೇಂದು ಪೌಲ್ ಅವರ ಸಂಬಂಧಿಕರೊಬ್ಬರಿಗೆ ಸೇರಿದ ಮಹೀಂದ್ರ ಬೊಲೇರೋ ಕಾರಿನಲ್ಲಿ ಮತಯಂತ್ರದೊಂದಿಗೆ ಚುನಾವಣಾ ಅಧಿಕಾರಿಗಳು ಇದ್ದದ್ದನ್ನ ಸ್ಥಳೀಯರು ಕಂಡಿದ್ದಾರೆ. ಅದಾದ ಬಳಿಕ, ಮತಯಂತ್ರ ತಿರುಚಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯರು ಕರೀಮ್ ಗಂಜ್ ಪ್ರದೇಶದಲ್ಲಿ ಹಿಂಸಾಚಾರ ನಡೆಸಿದ್ದಾರೆ. ಕಾರಿನ ಮೇಲೆ ದಾಳಿ ಮಾಡಿ, ಅದರೊಳಗಿದ್ದ ವ್ಯಕ್ತಿಗಳ ಮೇಲೂ ಉದ್ರಿಕ್ತರು ಹಲ್ಲೆ ಮಾಡಿದ್ದಾರೆಂಬ ಮಾಹಿತಿ ಸಿಕ್ಕಿದೆ.

ಅಸ್ಸಾಮ್​ನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ನಿನ್ನೆ ಗುರುವಾರ ಎರಡನೇ ಹಂತದ ಮತದಾನವಾಗಿತ್ತು. ಅಂದು ಸಂಜೆ ಮತಯಂತ್ರಗಳನ್ನ ಸ್ಟ್ರಾಂಗ್ ರೂಮ್​ಗೆ ಸಾಗಿಸುವಾಗ ಈ ಘಟನೆ ನಡೆದಿದೆ. ಆದರೆ, ಎಂಎಲ್​ಎ ಕಾರಿನಲ್ಲಿ ಪತ್ತೆಯಾದ ಇವಿಎಂ ಮೆಷೀನ್ ಭದ್ರವಾಗಿತ್ತೆನ್ನಲಾಗಿದೆ.

ಚುನಾವಣಾ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ, ಮತದಾನದ ನಂತರ ಮತಯಂತ್ರವನ್ನು ಸ್ಟ್ರಾಂಗ್ ರೂಮ್​ಗೆ ಸಾಗಿಸುತ್ತಿದ್ದಾಗ ಕಾರು ಕೆಟ್ಟು ಹೋಗಿದೆ. ಆಗ ಅಲ್ಲಿ ಬರುತ್ತಿದ್ದ ಮತ್ತೊಂದು ಕಾರಿನ ಮೂಲಕ ನಾವು ಮತಯಂತ್ರ ಸಾಗಿಸುತ್ತಿದ್ದೆವು. ತಮಗೆ ಅ ಕಾರು ಬಿಜೆಪಿ ಶಾಸಕ ಕೃಷ್ಣೇಂದು ಪೌಲ್ ಅವರಿಗೆ ಸೇರಿದ್ದೆಂದು ಗೊತ್ತಿರಲಿಲ್ಲ ಎಂದಿದ್ಧಾರೆ.

ಕೃಷ್ಣೇಂದು ಪೌಲ್ ಅವರು ಪತ್ತರ್​ಕಂಡಿ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲೂ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಪೌಲ್ ಕಾರಿನಲ್ಲಿ ಕಂಡು ಬಂದ ಇವಿಎಂ ಮೆಷೀನ್ ರತಬಾರಿ ಕ್ಷೇತ್ರಕ್ಕೆ ಸೇರಿದ ಮತಗಟ್ಟೆಯದ್ದಾಗಿದೆ.

“ಎವಿಎಂ ಮೆಷೀನ್​ಗಳನ್ನ ಖಾಸಗಿ ವಾಹನಗಳಲ್ಲಿ ಸಾಗಿಸುವ ಪ್ರಕರಣ ಬೆಳಕಿಗೆ ಬಂದಾಗೆಲ್ಲಾ ಈ ಕೆಲ ಅಂಶಗಳು ಸಾಮಾನ್ಯವಾಗಿರುತ್ತವೆ: ಒಂದು, ಈ ವಾಹನಗಳು ಬಿಜೆಪಿ ಅಭ್ಯರ್ಥಿ ಅಥವಾ ಅವರ ಬೆಂಬಲಿಗರಿಗೆ ಸೇರಿದ್ಧಾಗಿರುತ್ತವೆ. ಎರಡು, ಈ ಘಟನೆ ಅಕಸ್ಮಿಕವಾಗಿ ನಡೆದಿದೆ ಎಂದು ತಳ್ಳಿಹಾಲಾಗುತ್ತದೆ. ಮೂರು, ಈ ಪ್ರಕರಣ ಬೆಳಕಿಗೆ ತಂದವರು ಸೋತು ಸುಣ್ಣವಾದವರು ಎಂದು ಬಿಜೆಪಿ ತನ್ನ ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತದೆ” ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ ಟೀಕಿಸಿದ್ದಾರೆ.

Exit mobile version