ಕೋಲ್ಕತ್ತಾದಲ್ಲಿ ಅಗ್ನಿ ದುರಂತ: ಏಳು ಸಾವು, ಮೃತರ ಕುಟುಂಬಕ್ಕೆ ತಲಾ ೧೦ಲಕ್ಷ ಘೋಷಣೆ

ಕೊಲ್ಕತ್ತಾ, ಮಾ. 09: ಕೋಲ್ಕತ್ತಾದ ಸ್ಟ್ರಾಂಡ್ ರಸ್ತೆಯಲ್ಲಿರುವ ರೈಲ್ವೆ ಇಲಾಖೆ ಕಟ್ಟಡದಲ್ಲಿ ಸೋಮವಾರ ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ ನಾಲ್ಕು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳದ ಸಚಿವ ಸುಜಿತ್ ಬೋಸ್ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದು ತುಂಬಾ ದುಃಖಕರವಾಗಿದೆ. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ನೀಡಲಾಗುವುದು ಮತ್ತು ಒಬ್ಬ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸವನ್ನು ನೀಡಲಾಗುವುದು ಎಂದು ಹೇಳಿದರು. ದುರ್ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಆದೇಶ ನೀಡಿದ್ದಾರೆ. ಪೂರ್ವ ರೈಲ್ವೆಯ ಕಚೇರಿಯಲ್ಲಿರುವ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಇನ್ನೂ ಇಬ್ಬರು ವ್ಯಕ್ತಿಗಳು ಕಾಣೆಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವರು ತಿಳಿಸಿದ್ದಾರೆ. “ಇಂದಿನ ಬೆಂಕಿಯಲ್ಲಿ ಮೃತಪಟ್ಟ ಏಳು ಜನರಲ್ಲಿ ನಾಲ್ಕು ಅಗ್ನಿಶಾಮಕ ದಳ, ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಇಬ್ಬರು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಅಧಿಕಾರಿಗಳು ಇದ್ದರು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು” ಎಂದು ಸಚಿವರು ತಿಳಿಸಿದ್ದಾರೆ.

ಇನ್ನು ಈ ಅಗ್ನಿದುರಂತಕ್ಕೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ರೈಲ್ವೇ ಮಂತ್ರಿ ಪಿಯೂಷ್ ಗೋಯೆಲ್ ಸಂತಾಪ ಸೂಚಿಸಿದ್ದಾರೆ.

Exit mobile version