ಪ್ರಥಮ ಏಕದಿನ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಜಯ: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕೃನಾಲ್ ಪಾಂಡ್ಯ-ಪ್ರಸಿದ್ಧ ಕೃಷ್ಣ

ಪುಣೆ, ಮಾ. 24: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಟೀಂ ಇಂಡಿಯಾ, ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 66 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಅಲ್ಲದೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಇಲ್ಲಿನ ಎಸಿಎ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಹಗಲು ರಾತ್ರಿ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ನಿಗದಿತ 50 ಓವರ್‌ನಲ್ಲಿ 317 ರನ್ ಕಲೆಹಾಕಿತು. ಭಾರತದ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಶಿಖರ್ ಧವನ್(98) ರನ್‌ಗಳಿಸಿ ಶತಕ ವಂಚಿತರಾದರು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ(56) ಉತ್ತಮ ಆಟವಾಡಿದರೂ ದೊಡ್ಡ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ‌ಬಳಿಕ ಜೊತೆಯಾದ ಕೆ.ಎಲ್. ರಾಹುಲ್(62) ಹಾಗೂ ಕೃನಾಲ್ ಪಾಂಡ್ಯ(58) 6ನೇ ವಿಕೆಟ್‌ಗೆ ಮುರಿಯದ 112 ರನ್‌ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.

ಬಳಿಕ 318 ರನ್‌ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್‌ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಪತನಗೊಂಡ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ 251 ರನ್‌ಗಳಿಗೆ ಆಲೌಟ್‌ ಆಯ್ತು. ಜಾನಿ ಬೈರ್‌ಸ್ಟೋವ್ ಹಾಗೂ ಜೇಸನ್ ರಾಯ್ ಮೊದಲ ವಿಕೆಟಿಗೆ 14.2 ಓವರ್‌ಗಳಲ್ಲಿ 135 ರನ್‌ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದ್ದರು. ಆದರೆ ಶಾರ್ದೂಲ್‌ ಠಾಕೂರ್‌ ಮತ್ತು ಪ್ರಸಿದ್ಧ್‌ ಕೃಷ್ಣ ಅವರ ಮಾರಕ ಬೌಲಿಂಗ್‌ಗೆ ಇಂಗ್ಲೆಂಡಿನ ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿದ ಪರಿಣಾಮ ಭಾರತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು.

ಭಾರತದ ಪರ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ 8.1 ಓವರ್‌ನಲ್ಲಿ 54 ರನ್‌ ನೀಡಿ 4 ವಿಕೆಟ್‌ ಪಡೆದರೆ. ಶಾರ್ದೂಲ್‌ ಠಾಕೂರ್‌ 6 ಓವರ್‌ನಲ್ಲಿ 37 ರನ್‌ ನೀಡಿ 3 ವಿಕೆಟ್‌ ಪಡೆದರು. ಉಳಿದಂತೆ ಭುವನೇಶ್ವರ್‌ ಕುಮಾರ್‌ 2 ವಿಕೆಟ್‌, ಕೃನಾಲ್‌ ಪಾಂಡ್ಯ 1 ವಿಕೆಟ್‌ ಪಡೆಯುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

Exit mobile version