‘ಫಾರ್ ರಿಜಿಸ್ಟ್ರೇಶನ್’ ಮುಹೂರ್ತ

ಪೃಥ್ವಿ ಅಂಬಾರ್ ನಟನೆಯ ಹೊ‌ಸ ಚಿತ್ರ ‘ಫಾರ್ ರಿಜಿಸ್ಟ್ರೇಶನ್’ ಗೆ ಇಂದು ವಸಂತನಗರದ ಅಂಬಾ ಭವಾನಿ ದೇವಸ್ಥಾನದಲ್ಲಿ ಮಹೂರ್ತ ನೆರವೇರಿತು. ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದರು.

“ನಾನು ‘ದಿಯಾ’ ಚಿತ್ರಕ್ಕೂ ಮೊದಲೇ ಸಹಿ ಹಾಕಿದಂಥ ಚಿತ್ರ ‘ಫಾರ್ ರಿಜಿಸ್ಟ್ರೇಶನ್. ಒಂದು ಒಳ್ಳೆಯ ಕತೆ. ಜೊತೆಗೆ ದಿಯಾ ಸಂದರ್ಭದಲ್ಲಿ ಬಿಡುಗಡೆಯಾದ ‘ಲವ್ ಮಾಕ್ಟೇಲ್’ ನಾಯಕಿಯೊಂದಿಗೆ ನಟಿಸಬೇಕು ಎನ್ನುವ ವಿಚಾರ ಟ್ರೋಲ್ ಕೂಡ ಆಗಿತ್ತು. ಈಗ ಅದೇ ನಿಜವಾಗಿದೆ. ಹಾಗಾಗಿ ಚಿತ್ರದ ಬಗ್ಗೆ ಸಹಜ ನಿರೀಕ್ಷೆಗಳಿವೆ”ಎಂದರು ನಾಯಕ ಪೃಥ್ವಿ ಅಂಬಾರ್. ” ಚಿತ್ರದ ಹೆಸರು ನೋಡಿ ತುಂಬ ಮಂದಿ ವಾಹನಕ್ಕೆ ಸಂಬಂಧಿಸಿದ ಕತೆ ಎಂದುಕೊಂಡಿದ್ದಾರೆ. ಇದರಲ್ಲಿ ವಾಹನವನ್ನು ದಾಟಿದ ಸಂಗತಿಗಳಿವೆ. ಆ ಬಗ್ಗೆ ಹೆಚ್ಚು ಹೇಳಲಾರೆ” ಎಂದು ನಿರ್ದೇಶಕರ ಮುಖ ನೋಡಿದರು ಅಂಬಾರ್.

ನವೀನ್ ದ್ವಾರಕನಾಥ್ ಅವರಿಗೆ ಇದು ಮೊದಲ ಚಿತ್ರವಾದರೂ ರಂಗಭೂಮಿ ಕಲಾವಿದರಾಗಿ, ಕಿರುಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡವರು. “ಕಾಲೇಜ್ ದಿನಗಳ ಸ್ನೇಹಿತರ ಜೊತೆ ಸೇರಿ ಸಮಾಲೋಚನೆ ಮಾಡಿರುವ ಸಬ್ಜೆಕ್ಟ್ ಇದು. ಪೃಥ್ವಿ ಅವರ ‘ದಿಯಾ’ ಚಿತ್ರ ಬಿಡುಗಡೆಗೂ ಮೊದಲು ತುಳು ಸಿನಿಮಾವೊಂದರಲ್ಲಿ ಅವರ ನಟನೆ ನೋಡಿಯೇ ಮೆಚ್ಚಿ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಚಿತ್ರದ ಶೀರ್ಷಿಕೆ ಬಗ್ಗೆ ಹೇಳುವುದಾದರೆ, ರಿಜಿಸ್ಟ್ರೇಶನ್ ಎನ್ನುವುದು ವಾಹನಗಳಿಗೆ ಮಾತ್ರವಲ್ಲ; ಸಂಬಂಧಗಳಿಗೂ ಅಂಥದೊಂದು ಕ್ರಮ ಇರುತ್ತದೆ. ಅದು ಏನು ಎನ್ನುವುದನ್ನು ಚಿತ್ರದ ಮೂಲಕವೇ ನೋಡಬೇಕು” ಎನ್ನುವುದು ನವೀನ್ ದ್ವಾರಕನಾಥ್ ಮಾತು.

ಚಿತ್ರದ ನಿರ್ಮಾಪಕ ನವೀನ್ ರಾವ್ ಮಾತನಾಡಿ, “ನಾನು ನಿರ್ದೇಶಕರ ಬಾಲ್ಯ ಸ್ನೇಹಿತ. ಅವರು ತಂದ ಕತೆ ಕೂಡ ಇಷ್ಟವಾಯಿತು. ಈ ತಿಂಗಳ ಅಂತ್ಯದಲ್ಲಿ ಚಿತ್ರೀಕರಣ ಶುರು ಮಾಡಲಿದ್ದೇವೆ. ಸಕಲೇಶಪುರ, ಮಂಗಳೂರು, ಉಡುಪಿ ಮೊದಲಾದೆಡೆಗಳಲ್ಲಿ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆಯಲಿದೆ. ಎರಡನೇ ಶೆಡ್ಯೂಲ್ ಬೆಂಗಳೂರನ್ನು ಕೇಂದ್ರೀಕರಿಸಿ ಶೂಟಿಂಗ್ ಮಾಡಲಿದ್ದೇವೆ” ಎಂದರು.

ಹಿರಿಯ ನಟಿಯರಾದ ಸುಧಾರಾಣಿ, ಸುಧಾ ಬೆಳವಾಡಿ ಮತ್ತು ನಟ ಬಾಬು ಹಿರಣ್ಣಯ್ಯ ಮೊದಲಾದವರು ಇದರಲ್ಲಿ ಪ್ರಮುಖ ಪಾತ್ರ ಮಾಡಿದ್ದು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರದಲ್ಲಿ ಐದು ಹಾಡುಗಳಿದ್ದು ಸಂಗೀತ ನಿರ್ದೇಶಕ ಹರೀಶ್ ಕೂಡ ನಿರ್ದೇಶಕರ ಕಾಲೇಜ್ ಮೇಟ್ ಆಗಿದ್ದಾರೆ. ಜನಪ್ರಿಯ ನಟ ತಬಲಾನಾಣಿಯವರು ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡುವುದರ ಜೊತೆಗೆ ಸಂಭಾಷಣೆಯನ್ನು ರಚಿಸಿದ್ದಾರೆ.

Exit mobile version