ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊರೊನಾ ಲಸಿಕೆ ನೀಡಬೇಕು: ಪ್ರಧಾನಿ ಮೋದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ಮಾ. 05: ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ‌ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಸರಣಿ ಟ್ಟೀಟ್ ಮಾಡಿರುವ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೋವಿಡ್ ಲಸಿಕೆಗೆ ರೂ.250 ಶುಲ್ಕ ನಿಗದಿಪಡಿಸಿರುವುದರ ಪರಿಣಾಮ ಶೇ. 70ರಷ್ಟು ಬಡ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ‌ ಕೋವಿಡ್ ವಿರುದ್ಧದ ಸಮರಕ್ಕೆ ಹಿನ್ನಡೆಯಾಗಿದೆ. ಹೀಗಾಗಿ, ಕೋವಿಡ್ ಚಿಕಿತ್ಸೆ ಮತ್ತು ಲಸಿಕೆ ನಿಯಂತ್ರಣಕ್ಕಾಗಿ ಪಿ.ಎಂ ಕೇರ್ಸ್ ನಿಧಿಗೆ ಕೇಂದ್ರ ಸರ್ಕಾರ ಹಣ ಸಂಗ್ರಹಿಸಿದೆ. ಆ ನಿಧಿಯನ್ನು ಕೋವಿಡ್ ಲಸಿಕೆಯ ಉಚಿತ ವಿತರಣೆಗೆ ಬಳಸಬೇಕು.

ಈಗಾಗಲೇ ಭಾರತ ಎರಡು ಬಗೆಯ ಕೋವಿಡ್ ಲಸಿಕೆಗಳನ್ನು ಕಂಡು ಹಿಡಿದಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ದೇಶದಲ್ಲಿ ಇಲ್ಲಿನ ವರೆಗೆ ಶೇಕಡ 0.5ರಷ್ಟು ಜನಸಂಖ್ಯೆಗಷ್ಟೆ ಲಸಿಕೆ ನೀಡಿರುವುದು ವಿಷಾದನೀಯ ಬೆಳವಣಿಗೆ. ಇತ್ತೀಚೆಗೆ ಕೊರೊನಾ ಸೋಂಕು ಉಲ್ಭಣಗೊಳ್ಳುತ್ತಿರುವುದು ಕಳವಳಕಾರಿ ಬೆಳವಣಿಗೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದರೆ ಅನಾಹುತವಾದೀತು ಎಚ್ಚರ ಎಂದಿದ್ದಾರೆ.

Exit mobile version