ಬಾನೆತ್ತರಕ್ಕೆ ಹಾರಿದ ‘ಗಾಳಿಪಟ 2’; ಮತ್ತೊಮ್ಮೆ ಮೋಡಿ ಮಾಡಿತು ‘ಭಟ್ರು-ಗಣಿ’ ಕಾಂಬಿನೇಶನ್

Kannada

ಕನ್ನಡ ಚಿತ್ರರಂಗದ(Kannada Film Industry) ವಿಭಿನ್ನ ನಿರ್ದೇಶಕ(Director) ಎಂದೇ ಖ್ಯಾತರಾಗಿರುವ ‘ಯೋಗರಾಜ್ ಭಟ್’(Yograj bhat) ಮತ್ತು ‘ಗೋಲ್ಡನ್ ಸ್ಟಾರ್ ಗಣೇಶ್’(Golden Star Ganesh) ಕಾಂಬಿನೇಷನ್ ನಲ್ಲಿ ಬಹಳ ದಿನಗಳ ನಂತರ ತೆರೆಗೆ ಬಂದ ಸಿನಿಮಾ ‘ಗಾಳಿಪಟ 2’.

14 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ, ಗಾಳಿಪಟ ಮೊದಲ ಭಾಗ ದೊಡ್ಡ ಮಟ್ಟದ ಯಶಸ್ಸು ಕಂಡ ನಂತರ, ಅದೇ ಚಿತ್ರತಂಡ ಈಗ ‘ಗಾಳಿಪಟ 2’ ಸಿನಿಮಾ ನಿರ್ಮಾಣ ಮಾಡಿದ್ದು, ಚಿತ್ರ ಭರ್ಜರಿ ಯಶಸ್ಸನ್ನು ಗಳಿಸುತ್ತಿರುವುದು ನಮ್ಮ ಕಣ್ಣ ಮುಂದಿದೆ.

ಹೌದು, ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಾಣುವ ಮೂಲಕ ಗಣೇಶ್‌ ಅವರ ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿದಿದೆ ಎನ್ನುವ ಮಾಹಿತಿಯಿದೆ.
ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರನ್ನು ಅಕ್ಷರಶಃ ಮೋಡಿ ಮಾಡಿದ್ದಾರೆ.

ಇನ್ನು, ‘ಗಾಳಿಪಟ’ ಮೊದಲ ಭಾಗದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು ‘ಲೂಸಿಯ’(Lusiya) ನಿರ್ದೇಶಕ ಪವನ್ ಕುಮಾರ್ ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ. ಚಿತ್ರದಲ್ಲಿ ಎಲ್ಲಿಯೂ ರಾಜೇಶ್ ಕೃಷ್ಣನ್ ಅವರನ್ನು ಪ್ರೇಕ್ಷಕರು ಮಿಸ್ ಮಾಡಿಕೊಳ್ಳದಂತೆ ನಟಿಸುವ ಚಾಲೆಂಜ್ ಪವನ್ ಎದುರಿಗಿತ್ತು.

ಅಂತೆಯೇ, ಈ ಪಾತ್ರವನ್ನು ಪವನ್ ಕುಮಾರ್ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ ಎನ್ನುವ ಅಭಿಪ್ರಾಯ ಪ್ರೇಕ್ಷಕರಿಂದ ಕೇಳಿಬರುತ್ತಿದೆ. ಇನ್ನು, ಚಿತ್ರದ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದು, ತಮ್ಮ ಸೌಂದರ್ಯ ಹಾಗೂ ನಟನೆಗಾಗಿ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದಿದ್ದಾರೆ.

ಈ ಚಿತ್ರದಲ್ಲಿ ಗಣೇಶ್‌ ಅವರ ಪುತ್ರ ವಿಹಾನ್‌ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗಾಳಿಪಟ-2 ನೋಡಿದ ಜನರು ಗಣೇಶ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದಲ್ಲಿ ಮೊದಲ ಮೊದಲು ಜನರನ್ನು ನಕ್ಕು ನಗಿಸಿ ಭಾವುಕರನ್ನಾಗಿ ಮಾಡುವ ಗೋಲ್ಡನ್ ಸ್ಟಾರ್ ನಟನೆಗೆ ಪ್ರೇಕ್ಷಕರು ಸಲಾಂ ಎಂದಿದ್ದಾರೆ. ಅಂತೂ 14 ವರ್ಷದ ಹಿಂದಿನ ಇತಿಹಾಸ ಮರುಕಳಿಸಿದ್ದು, ನಟ ಗಣೇಶ್ “ಚಿತ್ರತಂಡ ಪಟ್ಟ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ” ಎಂದಿದ್ದಾರೆ.

ಚಿತ್ರ ಬೆಂಗಳೂರು, ಮೈಸೂರು ಭಾಗದಲ್ಲಿ ಮೊದಲ ದಿನವೇ ಹೌಸ್‌ ಫುಲ್‌ ಪ್ರದರ್ಶನಗಳನ್ನು ಕಂಡಿತ್ತು.
ಅಂತೂ, “ಗಾಳಿಪಟ 2” ಸಿನಿಮಾ ಗೆಲುವಿನ ಕೇಕೆ ಹಾಕಿರುವುದು ಚಿತ್ರತಂಡದ ಮೊಗದಲ್ಲಿ ನಗು ಮೂಡಿಸಿದೆ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿಚಾರದಲ್ಲಿಯೂ ಈ ಚಿತ್ರ ಮೆರೆದಿದ್ದು ನಿರ್ಮಾಪಕರು ಫುಲ್ ಖುಷ್ ಆಗಿದ್ದಾರೆ.

ಈ ಖುಷಿಯನ್ನು ವ್ಯಕ್ತಪಡಿಸಲು, ನಟ ಗಣೇಶ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪತ್ರವೊಂದನ್ನು ಪೋಸ್ಟ್‌ ಮಾಡುವ ಮೂಲಕ ಸಿನಿಮಾ ಗೆಲುವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದವನ್ನು ತಿಳಿಸಿದ್ದಾರೆ. “ನಮ್ಮ ‘ಗಾಳಿಪಟ 2’ ಚಿತ್ರವನ್ನು ನೀವೆಲ್ಲರೂ ಪ್ರೀತಿಯಿಂದ ಸ್ವೀಕರಿಸಿ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿರುವುದು ನನಗೆ ಬಹಳ ಸಂತಸ ಉಂಟು ಮಾಡಿದೆ.

ಅಭಿಮಾನಿಗಳು ಸಂಭ್ರಮಿಸುವ ಪ್ರತಿ ಕ್ಷಣವೂ ಕಲಾವಿದನನ್ನು ಆಶೀರ್ವದಿಸಿದಂತೆ, ಆ ನಿಟ್ಟಿನಲ್ಲಿ ನಾನು ನಿಜಕ್ಕೂ ಅದೃಷ್ಟವಂತ. ನನ್ನ ಮೊದಲನೇ ಸಿನಿಮಾದಿಂದ ಈಗಿನವರೆಗೂ ನನ್ನನ್ನು ಆಶೀರ್ವದಿಸುತ್ತಾ ತೋರುತ್ತಿರುವ ನಿಮ್ಮ ಪ್ರೀತಿಗೆ ನಾನು ಋಣಿ”
“ವಿಭಿನ್ನ ಬಗೆಯ ಪಾತ್ರಗಳ ಮೂಲಕ ಕನ್ನಡ ಸಿನಿ ರಸಿಕರಾದ ನಿಮ್ಮನ್ನು ರಂಜಿಸಿ ಖುಷಿಪಡಿಸುವ ಕಾರ್ಯವನ್ನು ನಾನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ.

ಅವುಗಳಲ್ಲಿ ಅನೇಕ ಪಾತ್ರಗಳು ನಿಮಗೆ ಆಪ್ತವೆನಿಸಿದರೆ ಒಂದಷ್ಟು ನಿಮ್ಮನ್ನು ನಿರಾಸೆಗೊಳಿಸಿರಬಹುದು. ಹಾಗಾಗಿ ಸಿನಿಮಾ ಬಗ್ಗೆ ನೀವು ನೀಡಿರುವ ತೀರ್ಪುಗಳನ್ನು ಸಮಭಾವ, ಸಮಚಿತ್ತದಿಂದ ಸ್ವೀಕರಿಸಿದ್ದೇನೆ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗದೆ, ಪ್ರತೀ ಚಿತ್ರದಲ್ಲೂ ನನ್ನಲ್ಲಿ ನಾನೇ ಒಬ್ಬ ಉತ್ತಮ ಕಲಾವಿದನಿಗಾಗಿ ಹುಡುಕಾಟ ನಡೆಸಿದ್ದೇನೆ.

ನಿಮ್ಮ ನಂಬಿಕೆಯ ಗಣೇಶ ನಿಮ್ಮ ನಿರೀಕ್ಷೆಯನ್ನು ಯಾವುದೇ ಕಾರಣಕ್ಕೆ ಹುಸಿ ಮಾಡದಂತೆ ಎಚ್ಚರ ವಹಿಸಿದ್ದೇನೆ. ಇದೆಲ್ಲವೂ ನೀವುಗಳು ನನ್ನ ಹಾಗೂ ನನ್ನ ಅಭಿನಯದ ಮೇಲಿಟ್ಟಿರುವ ಅಪಾರ ನಂಬಿಕೆಗೆ ನಾನು ಸಲ್ಲಿಸಬಹುದಾದ ಪುಟ್ಟ ಗೌರವ ಎಂಬುದಷ್ಟೆ ನನ್ನ ಭಾವನೆ”.


“ಗಾಳಿಪಟ 2’ ಸಿನಿಮಾದ ಮೂಲಕ ಮನೆ-ಮನೆಗೆ ಖುಷಿಯನ್ನು ಹಂಚಿದ ನಿರ್ದೇಶಕರಾದ ನಲ್ಮೆಯ ಶ್ರೀ ಯೋಗರಾಜ್ ಭಟ್ ಅವರಿಗೆ, ಹೆಮ್ಮೆಯ ನಿರ್ಮಾಪಕರಾದ ರಮೇಶ್ ರೆಡ್ಡಿ ಅವರಿಗೆ, ವಿತರಿಸಿದ ಕೆವಿಎನ್ ಸಂಸ್ಥೆಗೆ ಹಾಗೂ ನಮ್ಮ ‘ಗಾಳಿಪಟ 2’ ಸಿನಿಮಾದ ಇಡೀ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಮನದಾಳದ ಧನ್ಯವಾದಗಳು ಹಾಗೂ ಹೃತ್ಪೂರ್ವಕ ಅಭಿನಂದನೆಗಳು.

ಮನರಂಜಿಸುವ ನಮ್ಮ ಕಾಯಕ ನಿರಂತರವಾಗಿ ಸಾಗಲು ನಿಮ್ಮ ಪ್ರೀತಿ ಜೊತೆಗೆ ಅಕ್ಕರೆ ತುಂಬಿದ ಅಭಿಮಾನ ಸದಾ ಜೊತೆಗಿದ್ದರೆ ಸಾಕು” ಎಂದು ಸುದೀರ್ಘವಾದ ಬರಹವನ್ನು ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಬಿಡುಗಡೆಯಾಗಿ ಒಂದು ವಾರ ಕಳೆದರೂ, ಅಭಿಮಾನಿಗಳಲ್ಲಿ ‘ಗಾಳಿಪಟ-2’ ಕ್ರೇಜ್ ಕಡಿಮೆಯಾಗಿಲ್ಲ. ಪ್ರೇಕ್ಷಕರು ಪ್ರತಿದಿನ ಅದೇ ಉತ್ಸಾಹದೊಂದಿಗೆ ಥಿಯೇಟರ್ ಗೆ ಲಗ್ಗೆಯಿಡುತ್ತಿದ್ದಾರೆ, ವಾರಾಂತ್ಯದಲ್ಲಂತೂ ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

Exit mobile version