ಆನ್ ಲೈನ್ ಕುರಿತು ಮೋದಿಗೆ ದೂರು ನೀಡಿದ ವರ್ಷದ ಬಾಲಕಿ : ವಿಡಿಯೋ ವೈರಲ್

ಶ್ರೀನಗರ, ಮೇ. 31: ಕೊರೊನಾ ಸಂಕಷ್ಟದಿಂದಾಗಿ ಶಿಕ್ಷಣ ಆನ್ ಲೈನ್ ನಲ್ಲೇ ನಡೆಯುವಂತಾಗಿದ್ದು, ಬೆಳಗ್ಗೆ ಎದ್ದರೆ ಮಕ್ಕಳು ಮೊಬೈಲ್, ಲ್ಯಾಪ್‌ಟಾಪ್ ಹಿಡಿದು ಕೂರುವಂತಾಗಿದೆ. ಶಾಲೆಗೆ ತೆರಳುವ, ಪಾಠದ ಜೊತೆಗೆ ಆಟ, ಸ್ನೇಹಿತರ ಓಡಾಟ ಎಲ್ಲವೂ ಮಿಸ್ ಆಗಿದೆ. ಜೊತೆಗೆ, ಆನ್‌ಲೈನ್ ತರಗತಿಗಳಲ್ಲಿ ಅಧಿಕ ಒತ್ತಡದ ಮಕ್ಕಳು ದೂರುತ್ತಿದ್ದಾರೆ. ಈ ಕುರಿತು ಇಲ್ಲೊಬ್ಬಳು 6 ವರ್ಷದ ಬಾಲಕಿ ಆನ್‌ಲೈನ್ ಕ್ಲಾಸ್ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿಡಿಯೊ ಮೂಲಕ ದೂರು ನೀಡಿದ್ದಾಳೆ.

ಪತ್ರಕರ್ತ ಔರಂಗಜೇಬ್ ನಕ್ಷ್ ಬಂಧಿ ಎಂಬುವವರು ಜಮ್ಮು ಮತ್ತು ಕಾಶ್ಮೀರದ ಆರು ವರ್ಷದ ಬಾಲಕಿಯೊಬ್ಬಳು ದೀರ್ಘ ಸಮಯದ ಆನ್‌ಲೈನ್ ಕ್ಲಾಸ್ ಬಗ್ಗೆ ಪ್ರಶ್ನೆ ಎತ್ತಿದ್ದು, ಮೋದಿಯವರಿಗೆ ದೂರು ನೀಡಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

45 ಸೆಕೆಂಡುಗಳ ವಿಡಿಯೊದಲ್ಲಿ, ‘ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಆನ್‌ಲೈನ್ ತರಗತಿಗಳು ಮಧ್ಯಾಹ್ನ 2 ಗಂಟೆವರೆಗೂ ಮುಂದುವರಿಯುತ್ತವೆ. ಇಂಗ್ಲಿಷ್, ಉರ್ದು, ಗಣಿತ, ಇವಿಎಸ್ ಬಳಿಕ ಕಂಪ್ಯೂಟರ್ ಕ್ಲಾಸ್ ಸಹ ಇರುತ್ತದೆ. ಮಕ್ಕಳಿಗೆ ತುಂಬಾ ಒತ್ತಡವಾಗುತ್ತಿದೆ. ಚಿಕ್ಕ ಮಕ್ಕಳಿಗೆ ಏಕಿಷ್ಟು ಕೆಲಸ ಮೋದಿ ಸಾಹೇಬ್?’ ಎಂದು ಪುಟ್ಟ ಬಾಲಕಿ ಪ್ರಶ್ನಿಸಿದ್ದಾಳೆ. ಕೆಲವು ಕ್ಷಣ ಮೌನವಾಗಿ ಬಳಿಕ ಮತ್ತೆ ಮಾತು ಆರಂಭಿಸಿದ ಬಾಲಕಿ, ‘ಏನು ಮಾಡಬಹುದು? ಅಸ್ಸಲಾಮಾಲಿಕುಮ್, ಮೋದಿ ಸಾಹೇಬ್, ಬೈ’ಎಂದು ಹೇಳಿದ್ದಾಳೆ.

ಶನಿವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೊ ಕ್ಲಿಪ್‌ ಅನ್ನು 57,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಸುಮಾರು 1,200ಕ್ಕೂ ಹೆಚ್ಚು ಬಳಕೆದಾರರು ವಿಡಿಯೊವನ್ನು ರಿಟ್ವೀಟ್ ಮಾಡಿದ್ದಾರೆ.

Exit mobile version