ಗೋವಾ, ಜ. 16: 51ನೇ ಅಂತಾರಾಷ್ಟ್ರೀಯ ಸಿನಿಮಾ ಉತ್ಸವಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾಲನೆ ನೀಡಿದರು.
ಗೋವಾದ ಪಣಜಿಯ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಜನವರಿ 16ರಿಂದ 24ರವರಗೆ ನಡೆಯಲಿರುವ ಈ ಉತ್ಸವದಲ್ಲಿ 119 ಸಿನಿಮಾಗಳು ಪ್ರಸಾರಗೊಳ್ಳಲಿವೆ. ಇದು ಏಷ್ಯಾದಲ್ಲೇ ನಡೆಯುವ ಅತಿದೊಡ್ಡ ಸಿನಿ ಉತ್ಸವಗಳಲ್ಲಿ ಒಂದಾಗಿದೆ.
ತಮ್ಮ ನಟನೆ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ನಟ ಸುದೀಪ್ ಭಾಗಿಯಾಗಿದ್ದು, ಪ್ರತಿಷ್ಠಿತ ಅಂತಾರಾಷ್ಟ್ರೀಯ ಫಿಲ್ಮ್ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಸಿನಿಮಾ ಉತ್ಸವ ಉದ್ಘಾಟಿಸಿದ ಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಯನ್ನು ಸುದೀಪ್ ಪಡೆದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.