ಹಬ್ಬಗಳಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರ್ಕಾರ

ಬೆಂಗಳೂರು, ಆ. 13: ರಾಜ್ಯದ್ಯಾಂತ ಕೊರೊನಾ 3ನೇ ಅಲೆ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಮಂದೆ ಬರುತ್ತಿರುವ ಹಬ್ಬಗಳಿಗೆ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ನೂತನ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.

ಈ ಬಾರಿ ಆಗಸ್ಟ್ ನಿಂದ ಅಕ್ಟೋಬರ್ ವರೆಗೆ ಸಾಲು ಸಾಲು ಹಬ್ಬಗಳಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಬ್ಬಗಳಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಈ ಅವಧಿಯಲ್ಲಿ ಗಣೇಶ ಚತುರ್ಥಿ, ಮೊಹರಂ, ಶ್ರೀ ಕೃಷ್ಣ ಜನ್ಮಾಷ್ಟಮಿ, ನವರಾತ್ರಿ ಸೇರಿದಂತೆ ಹಲವು ಹಬ್ಬಗಳು ಇರುವುದರಿಂದ ರಾಜ್ಯ ಸರ್ಕಾರ ನೂತನ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.

ಮಾರ್ಗಸೂಚಿಗಳು

  1. ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಮತ್ತು ಇತರೆ ಧಾರ್ಮಿಕ ಸ್ಥಳ ಸೇರಿದಂತೆ ಎಲ್ಲ ಪೂಜಾ ಸ್ಥಳಗಳನ್ನು ತೆರೆಯಲು ಕೊವಿಡ್-19 ನಿಯಮಗಳ ಪಾಲನೆ ಅಡಿಯಲ್ಲಿ ಅನುಮತಿ ನೀಡಲಾಗಿದೆ.
  2.  ದೇವಸ್ಥಾನಗಳಲ್ಲಿ ಹಬ್ಬ ಹರಿದಿನ, ಜಾತ್ರೆ, ಮಹೋತ್ಸವ, ಮೆರವಣಿಗೆ, ಸಭೆ ಮತ್ತು ಸಮಾರಂಭಗಳಿಗೆ ಯಾವುದೇ ಅನುಮತಿ ಇರುವುದಿಲ್ಲ.
  3. ಹಬ್ಬಗಳ ಸಂದರ್ಭದಲ್ಲಿ ಸಭೆ ಸಮಾರಂಭಗಳು ತೀರಾ ಅಗತ್ಯವಾಗಿದ್ದಲ್ಲಿ ಬಿಬಿಎಂಪಿ ಆಯುಕ್ತರು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳೀಯ ನಿರ್ಬಂಧಗಳನ್ನು ವಿಧಿಸುವಂತೆ ಆದೇಶಿಸಲಾಗಿದೆ.
  4. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಈ ಕೊವಿಡ್-19 ಮಾರ್ಗಸೂಚಿಗಳು ಪಾಲನೆ ಆಗುವಂತೆ ನೋಡಿಕೊಳ್ಳತಕ್ಕದ್ದು.
  5. ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಎಲ್ಲ ರೀತಿಯ ಒಗ್ಗೂಡುವಿಕೆಯ ಸಭೆ ಮತ್ತು ಸಮಾರಂಭಗಳನ್ನು ನಿಷೇಧಿಸಲಾಗಿದೆ.

ಮೊಹರಂಗೆ ಮಾರ್ಗಸೂಚಿ

  1. ಖಬರಸ್ಥಾನ್ ಒಳಗೊಂಡಂತೆ ಯಾವುದೇ ಖಾಲಿ ಜಾಗದಲ್ಲಿ ಯಾವುದೇ ತರಹದ ಸಭೆ ಏರ್ಪಡಿಸುವುದನ್ನು ನಿರ್ಬಂಧಿಸಲಾಗಿದೆ. ಖಬರಸ್ಥಾನಗಳಲ್ಲಿ ಕೇವಲ ದಫನ ಮಾಡುವುದಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಮೊಹರಂಗೆ ಸಂಬಂಧಿಸಿದ ಆಚರಣೆಗಳಿಗೆ ಅನುಮತಿ ಇರುವುದಿಲ್ಲ.
  2. ಪ್ರಾರ್ಥನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು
  3. 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವುದು.
  4. ಸಾಮಾಜಿಕ ಅಂತರ ಕಾಪಡಿಕೊಳ್ಳುವುದು ಹಾಗೂ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ.
Exit mobile version