ಕೊರೊನಾ ತಡೆಗೆ ಸರ್ಕಾರದ ಟಫ್ ರೂಲ್ಸ್ ಜಾರಿ: ನಿಯಮ ಮೀರಿದರೆ ದಂಡ ಪಾವತಿ ನಿಶ್ಚಿತ

ಬೆಂಗಳೂರು, ಮಾ. 25: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದು, ನಿಯಮ ಉಲ್ಲಂಘನೆ ಮಾಡಿದರೆ ದಂಡ ಸಹ ನಿಗದಿ ಮಾಡಿದೆ.

ಪ್ರಮುಖವಾಗಿ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಮಾಸ್ಕ್ ಕಡ್ಡಾಯಗೊಳಿಸಿದ್ದು, ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 250 ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 100 ರೂ. ದಂಡ ನಿಗದಿಪಡಿಸಲಾಗಿದೆ.

ಮತ್ತೊಂದೆಡೆ ಹೆಚ್ಚಿನ ಜನದಟ್ಟಣೆ ಸೇರುವುದನ್ನು ತಡೆಯುವ ಸಲುವಾಗಿ ಸಭೆ ಸಮಾರಂಭಗಳಲ್ಲಿ ಜನರ ಮಿತಿ ನಿಗದಿಪಡಿಸಲಾಗಿದೆ. ಅದರಂತೆ ಮದುವೆ ಹೊರಾಂಗಣದಲ್ಲಿ 500 ಜನ, ಮದುವೆ ಒಳಾಂಗಣದಲ್ಲಿ 200 ಜನಕ್ಕೆ ಸೀಮಿತಗೊಳಿಸಲಾಗಿದೆ. ಇನ್ನೂ ಹುಟ್ಟುಹಬ್ಬ ಹೊರಾಂಗಣದಲ್ಲಿ 100 ಜನ ಹಾಗೂ ಹುಟ್ಟುಹಬ್ಬ ಒಳಾಂಗಣದಲ್ಲಿ ಕೇವಲ 50 ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಇನ್ನೂ ನಿಧನಕ್ಕೆ ಸಂಬಂಧಿಸಿದಂತೆ ಹೊರಾಂಗಣದಲ್ಲಿ 100 ಜನ ಹಾಗೂ ನಿಧನ ಒಳಾಂಗಣದಲ್ಲಿ 50 ಜನರಿಗೆ ಪಾಲ್ಗೊಳ್ಳಲು ಸರ್ಕಾರ ಅವಕಾಶ ನೀಡಿದ್ದು, ಅಂತ್ಯಕ್ರಿಯೆ ಸ್ಥಳದಲ್ಲಿ 50 ಜನರು ಮಾತ್ರ ಇರಬೇಕೆಂದು ಸೂಚನೆ ನೀಡಿದೆ. ಉಳಿದಂತೆ ಇತರೆ ಕಾರ್ಯಕ್ರಮಗಳಿಗೆ 100 ಜನರು ಪಾಲ್ಗೊಳ್ಳುವ ಅವಕಾಶ ಮಾಡಿಕೊಡಲಾಗಿದೆ. ಇನ್ನೂ ಧಾರ್ಮಿಕ ಕಾರ್ಯಕ್ರಮಗಳಿಗೆ ಹೊರಾಂಗಣ 500 ಜನ,
ರಾಜಕೀಯ ಕಾರ್ಯಕ್ರಮ‌ ಹೊರಾಂಗಣ 500 ಜನರಿಗೆ ಪಾಲ್ಗೊಳ್ಳುವ ಅವಕಾಶ ನೀಡಿ ಸರ್ಕಾರ ಮಾರ್ಗಸೂಚಿ ನೀಡಿದೆ.

ಸರ್ಕಾರ ಬಿಡುಗಡೆ ಮಾಡಿರುವ ಈ ಎಲ್ಲಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದರೆ ದಂಡ ವಿಧಿಸಲು ಸರ್ಕಾರ ನಿರ್ಧಾರ ಮಾಡಿದೆ. ಅದರಂತೆ ನಿಯಮ ಉಲ್ಲಂಘನೆಯಾದರೆ ಸ್ಥಳದ ಮಾಲೀಕರಿಗೆ ಹಾಗೂ ಆಯೋಜಕರಿಗೆ ದಂಡ ನಿಗದಿ ಮಾಡಿದ್ದು, ಎಸಿ ಸಭಾಂಗಣ 10000 ರೂ. ದಂಡ, ನಾನ್ ಎಸಿ ಸಭಾಂಗಣ 5000 ರೂ. ದಂಡ ಜತೆಗೆ ಕಾರ್ಯಕ್ರಮದ ಆಯೋಜಕರಿಗೆ 10000 ರೂ. ದಂಡ ನಿಗದಿ ಮಾಡಲಾಗಿದೆ.

Exit mobile version