ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅಂಗಾಂಗ ದಾನಿಗಳ ಅಂತ್ಯಕ್ರಿಯೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Bengaluru: ಅಂಗಾಂಗಗಳನ್ನು ದಾನ ಮಾಡಿ ಅನೇಕ ಜನರಿಗೆ ಜೀವನ ಕೊಡುವಂಥ ಉದಾತ್ತ ದಾನಿಗಳ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದರ ಜೊತೆಗೆ ಅಂಗಾಗ ದಾನಿಗಳ ಕುಟುಂಬಕ್ಕೆ ಪ್ರಮಾಣ ಪತ್ರ ನೀಡುವುದು ಇತ್ಯಾದಿ ಕೆಲಸವನ್ನು ಮಾಡಲು ತೀರ್ಮಾನಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಮಾಹಿತಿಯನ್ನು ನೀಡಿದ್ದು, ಶೀಘ್ರದಲ್ಲೇ ಈ ನೀತಿಯನ್ನು ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದಿದ್ದಾರೆ.

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾನವೀಯ ನೆಲೆಯಲ್ಲಿ ‘ಅಂಗಾಂಗ ದಾನ’ ಮಾಡಿ ಇನ್ನೊಬ್ಬರ ಜೀವ ಉಳಿಸಲು ನೆರವಾಗುವ ವ್ಯಕ್ತಿಗಳನ್ನು ಮತ್ತು ಕುಟುಂಬದವರನ್ನು ಗುರುತಿಸಿ ಗೌರವಿಸಲು ರಾಜ್ಯ ಸರ್ಕಾರವು ಚಿಂತನೆ ನಡೆಸಿದೆ ಎಂದು ಈ ಕುರಿತಾಗಿ ಟ್ವೀಟ್ (Tweet) ಮೂಲಕ ಮಾಹಿತಿಯನ್ನು ತಿಳಿಸಿದ್ದಾರೆ.

ತಮಿಳುನಾಡು (Tamilnadu) ಮಾದರಿಯಲ್ಲಿ, ಅಂಗಾಂಗ ದಾನ ಮಾಡುವ ವ್ಯಕ್ತಿ ಅಥವಾ ಕುಟುಂಬಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸುವ ಹಾಗೂ ಅಂಗಾಂಗ ದಾನಿಗಳ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸುವ ಬಗ್ಗೆಯೂ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಮೂಲಕ ಅಂಗಾಂಗ ದಾನದ ಮಹತ್ವವನ್ನು ಸಾರಲು ಮತ್ತು ಮತ್ತಷ್ಟು ಜನರಿಗೆ ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಸರ್ಕಾರವು ಶೀಘ್ರದಲ್ಲೇ ನೀತಿಯೊಂದನ್ನು ರೂಪಿಸಲಿದೆ ಎಂದು ತಿಳಿಸಿದ್ದಾರೆ. ಮತ್ತೊಂದು ವ್ಯಕ್ತಿಯ ಜೀವ ಉಳಿಸುವ ನಿಟ್ಟಿನಲ್ಲಿ ಅಂಗಾಂಗ ದಾನ ಮಹತ್ವದ ಪಾತ್ರ ವಹಸುತ್ತದೆ.

ಅಂಗಾಂಗ ದಾನದ ಬಗ್ಗೆ ಹಲವರಲ್ಲಿ ಅಪನಂಬಿಕೆ ಇರುವುದಲ್ಲದೆ ಈ ಬಗ್ಗೆ ಜಾಗೃತಿಯ ಕೊರತೆಯೂ ಇದೆ. ಈ ಹಿನ್ನೆಲೆಯಲ್ಲಿ ಅಂಗಾಂಗ ದಾನವನ್ನು ನೀಡುವಂತೆ ಪ್ರೋತ್ಸಾಹ ನೀಡುವ ಹಲವು ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ (Health Department) ಮತ್ತು ಸರ್ಕಾರ ಹಮ್ಮಿಕೊಂಡಿದ್ದು, ಅಪಘಾತದಲ್ಲಿ ನಿಧನರಾಗಿದ್ದ ಸಂಚಾರಿ ವಿಜಯ್ (Sanchari Vijay) ಸೇರಿದಂತೆ ಕೆಲವು ಮೃತರ ಕುಟುಂಬ ಅಂಗಾಂಗ ದಾನ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಂಡು ಮಾದರಿಯಾಗಿತ್ತು.

ಇನ್ನೂ ಗ್ರಾಮೀಣ ಭಾಗಗಳಲ್ಲಿ ಇದರ ಬಗ್ಗೆ ಅಪನಂಬಿಕೆ ಇದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಇಂತಹದೊಂದು ಪ್ರೋತ್ಸಾಹದಾಯಕ ಕ್ರಮ ಕೈಗೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಭವ್ಯಶ್ರೀ ಆರ್ ಜೆ

Exit mobile version