ರಾಜ್ಯದಲ್ಲಿ ಲಭ್ಯವಿರುವ ಕೋವಿಡ್ ಲಸಿಕೆ, ಆಕ್ಸಿಜನ್, ವೆಂಟಿಲೇಟರ್ ಹಾಗೂ ಇತರ ಸೌಲಭ್ಯಗಳ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ಮೇ. 24: ರಾಜ್ಯದಲ್ಲಿ ಲಭ್ಯ ಇರುವ ಕೋವಿಡ್ ಲಸಿಕೆ, ಆಕ್ಸಿಜನ್, ವೆಂಟಿಲೇಟರ್ ಹಾಗೂ ಇತರ ಸೌಲಭ್ಯಗಳ ಕುರಿತು ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡ ಕುಟುಂಬಗಳು ಹಾಗೂ ದುಡಿಯುವ ವರ್ಗದವರಿಗೆ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದ್ದೆ. ಆದರೆ ರಾಜ್ಯ ಸರ್ಕಾರ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು, ಸರ್ಕಾರದ ಪ್ಯಾಕೇಜ್ ಯಾರ ಉಪಯೋಗಕ್ಕೂ ಬರುವಂತದಲ್ಲ. ಪತ್ರಿಕಾ ವಿತರಕರೂ ಇಂದು ನನ್ನನ್ನು ಭೇಟಿ ಮಾಡಿ ಪರಿಹಾರ ಘೋಷಣೆಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ. ಅವರನ್ನೂ ಸಹ ರಾಜ್ಯ ಸರ್ಕಾರ ಪರಿಗಣಿಸಿ ನೆರವು ಒದಗಿಸಬೇಕು. ಜೊತೆಗೆ ಉಳಿದ ಕಾರ್ಮಿಕರಿಗೂ ಸಹಾಯ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಕಷ್ಟ ಕಾಲದಲ್ಲಿ ನಮ್ಮ ಪಕ್ಷದ ಎಲ್ಲ ಶಾಸಕರು ಬಡವರಿಗೆ ದಿನಸಿ ಕಿಟ್, ಔಷಧ, ಆಂಬುಲೆನ್ಸ್ ಮತ್ತಿತರ ನೆರವು ಒದಗಿಸುತ್ತಿದ್ದಾರೆ. ಅವರ ಸೇವೆಗೆ ನಾಡಿನ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. ಲಾಕ್ ಡೌನ್ ಮುಗಿಯುವವರೆಗೆ ಹೀಗೆ ತಮ್ಮ ಸೇವಾ ಕಾರ್ಯಗಳನ್ನು ಮುಂದುವರೆಸಬೇಕು. ಲಸಿಕೆ ವಿಚಾರದಲ್ಲಿ ಅಪಪ್ರಚಾರ ಏನಿಲ್ಲ. ಲಸಿಕೆ ಇಲ್ಲ ಎಂಬುದು ವಾಸ್ತವ. 18 ವರ್ಷ ಮೀರಿದವರಿಗೆ ಮೇ 1ರಿಂದ ಲಸಿಕೆ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಈಗ ಲಸಿಕೆ ಕೊಡುತ್ತಿಲ್ಲ. ಇದು ಸುಳ್ಳೇ? ಜನರಿಗೆ ಲಸಿಕೆ ಸಿಗುತ್ತಿಲ್ಲ ಎಂದರೆ ಅಪಪ್ರಚಾರ ಹೇಗಾಗುತ್ತೆ? ಎಂದು ಪ್ರಶ್ನಿಸಿದ್ದಾರೆ.

ಮೇ 1ರಂದು ಮುಖ್ಯಮಂತ್ರಿ ಅವರು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಭಿಯಾನಕ್ಕೆ ಚಾಲನೆ ನೀಡಿ ಮೂರು ವಾರಗಳಾದರೂ ರಾಜ್ಯಕ್ಕೆ ಲಸಿಕೆ ಬಂದಿಲ್ಲ. ಬಿಜೆಪಿ ನಾಯಕರು ತಾವು ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡು ಈಗ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರೆ ಹೇಗೆ?. ಬೇರೆ ದೇಶಗಳಲ್ಲಿ ಅಲ್ಲಿಯ ಅಧ್ಯಕ್ಷರು, ಪ್ರಧಾನಿಗಳೇ ಮೊದಲು ಲಸಿಕೆ ಹಾಕಿಸಿಕೊಂಡರು. ನರೇಂದ್ರ ಮೋದಿ ಅವರೇಕೆ ವಿಳಂಬ ಮಾಡಿದರು? ಅದಕ್ಕೆ ಅನುಮಾನ ಬಂದು ಯಾರೋ ಕೆಲವರು ಅಪಪ್ರಚಾರ ಮಾಡಿರಬಹುದು.
ಈಗ ನಾನು ಲಸಿಕೆ ಹಾಕಿಸಿಕೊಂಡಿಲ್ಲವೇ? ಎಂದಿದ್ದಾರೆ.

ಅಲ್ಲದೇ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ತಲಾ ಒಂದು ಕೋಟಿ ಕೊಡಿ, ಲಸಿಕೆ ಖರೀದಿ ಮಾಡಿ ಜನರಿಗೆ ಹಂಚುತ್ತೇವೆ ಎಂದರೆ ಅದಕ್ಕೂ ಸಿಎಂ ಒಪ್ಪಿಗೆ ಕೊಡುತ್ತಿಲ್ಲ. ಸರ್ಕಾರದ ಹಣದಲ್ಲಿ ಲಸಿಕೆ ವಿತರಣೆ ಮಾಡುವುದರಲ್ಲಿ ತಪ್ಪೇನಿದೆ. ಸರ್ಕಾರ ಮಾಡುವುದೂ ಅದೇ ಕೆಲಸ ಅಲ್ಲವೇ? ಎಂದು ಪ್ರಶ್ನಿಸಿರುವ ಅವರು, ಬ್ಲಾಕ್ ಫಂಗಸ್ ಕಾಯಿಲೆಗೆ ಅಗತ್ಯ ಇಂಜೆಕ್ಷನ್ ದೊರೆಯುತ್ತಿಲ್ಲ. ಮಾರಣಾಂತಿಕ ಕಾಯಿಲೆಗೆ ಔಷಧ ಇಲ್ಲ ಎಂದರೆ ಅದು ಕೊಲೆಗೆ ಸಮಾನ. ಈ ರೋಗದಿಂದ ಪ್ರಾಣ ಕಳೆದುಕೊಂಡವರ ಸಾವಿನ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು.

ರೋಗಿಗಳಿಗೆ ಅಗತ್ಯ ಸಂದರ್ಭದಲ್ಲಿ ಆಕ್ಸಿಜನ್, ಆಸ್ಪತ್ರೆ, ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದರೆ ಪ್ರಧಾನಿ ಮೋದಿ ಅವರು ಕಣ್ಣೀರು ಹಾಕಿ ನಾಟಕ ಮಾಡಬೇಕಾದ ಪರಿಸ್ಥಿತಿ ಬರುತ್ತಿತ್ತೇ? ಕಣ್ಣೀರು ಹಾಕೋದರಿಂದ ಹೋದ ಜೀವಗಳು ವಾಪಾಸು ಬರಲ್ಲ, ಇನ್ನಾದರೂ ಜನರಿಗೆ ವೈದ್ಯಕೀಯ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಲಿ ಎಂದು ಒತ್ತಾಯಿಸಿ ಸರಣಿ ಟ್ವೀಟ್ ಮಾಡಿದ್ದಾರೆ.

Exit mobile version