ತನ್ನೆಲ್ಲಾ ಆಸ್ತಿಯನ್ನ ರಾಹುಲ್ ಗಾಂಧಿ ಹೆಸರಿಗೆ ಬರೆದ ೭೮ರ ಅಜ್ಜಿ!

rahul gandhi

ಕಾಂಗ್ರೆಸ್(Congress) ಪಕ್ಷದ(Party) ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿಯವರ(Rahul Gandhi) ವಿಚಾರಧಾರೆಗಳಿಂದ ಪ್ರಭಾವಿತಳಾಗಿ ೫೦ ಲಕ್ಷ ಮೌಲ್ಯದ ಚಿರಾಸ್ಥಿ ಮತ್ತು ೧೦೦ ಗ್ರಾಂ ಚಿನ್ನ ಸೇರಿದಂತೆ ತನ್ನೆಲ್ಲಾ ಆಸ್ತಿಯನ್ನು ಉತ್ತರಾಖಂಡದ(Uttarkhand) ೭೮ ವರ್ಷದ ಅಜ್ಜಿ, ರಾಹುಲ್ ಗಾಂಧಿಯವರ ಹೆಸರಿಗೆ ಬರೆದು ವಿಲ್ ಮಾಡಿದ್ದಾರೆ.

ಉತ್ತರಾಖಂಡದ ಡೆಹ್ರಾಡೂನ್ ನಿವಾಸಿಯಾದ ಪುಪ್ಪಾ ಮುಂಜಿಯಾಲ್ ಎಂಬ ೭೮ ವರ್ಷದ ಮಹಿಳೆ ತನ್ನ ಎಲ್ಲ ಆಸ್ತಿಯನ್ನು ರಾಹುಲ್ ಗಾಂಧಿಯವರ ಹೆಸರಿಗೆ ಬರೆದು ವಿಲ್ ಅನ್ನು ಡೆಹ್ರಾಡೂನ್ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ವಿಲ್ ನಲ್ಲಿ ಹೇಳಿರುವಂತೆ ” ನಾನು ರಾಹುಲ್ ಗಾಂಧಿಯವರ ವಿಚಾರಧಾರೆಗಳಿಂದ ಪ್ರಭಾವಿತಳಾಗಿದ್ದೇನೆ. ಅವರ ವಿಚಾರಗಳ ಅವಶ್ಯಕತೆ ಈ ದೇಶಕ್ಕಿದೆ. ನಾನು ಕಳೆದ ಅನೇಕ ವರ್ಷಗಳಿಂದ ರಾಹುಲ್ ಗಾಂಧಿಯವರನ್ನು ಗಮನಿಸುತ್ತಿದ್ದೇನೆ, ಅವರು ಸಾಮರಸ್ಯ ಮತ್ತು ಬಹುತ್ವಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಅವರು ಈ ದೇಶದ ಪ್ರಧಾನಿಯಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಾರೆ ಎಂಬ ಭರವಸೆ ನನಗಿದೆ. ಹೀಗಾಗಿ ನಾನು ನನ್ನೆಲ್ಲಾ ಆಸ್ತಿಯನ್ನು ರಾಹುಲ್ ಗಾಂಧಿಯವರ ಹೆಸರಿಗೆ ಬರೆದಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು ಡೆಹ್ರಾಡೂನ್ ಜಿಲ್ಲೆಯ ಕಾಂಗ್ರೆಸ್ ಮುಖಂಡ ಪ್ರೀತಮ್ ಸಿಂಗ್ ಅವರ ನಿವಾಸದಲ್ಲಿ ಪುಷ್ಪಾ ಮುಂಜಿಯಲ್ ಅವರು ರಾಹುಲ್ ಗಾಂಧಿಗೆ ತಮ್ಮ ಆಸ್ತಿಯನ್ನು ವಿಲ್ ಮಾಡಿದ್ದಾರೆ ಎಂದು ಡೆಹ್ರಾಡೂನ್ ಕಾಂಗ್ರೆಸ್ ಮಹಾನಗರ ಅಧ್ಯಕ್ಷ ಲಾಲ್‌ಚಂದ್ ಶರ್ಮಾ ತಿಳಿಸಿದ್ದಾರೆ. ಈ ವಿಲ್ ಪ್ರಕಾರ ಪುಪ್ಪಾ ಮುಂಜಿಯಾಲ್ ಅವರ ಸಮಸ್ತ ಆಸ್ತಿಗೆ ರಾಹುಲ್ ಗಾಂಧಿಯವರು ಒಡೆಯರಾಗಿರುತ್ತಾರೆ.

ಅದನ್ನು ಅವರು ತಮ್ಮ ಸ್ವಇಚ್ಛೆಯಂತೆ ಬಳಸಬಹುದು. ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಗೂ ಈ ಆಸ್ತಿಯನ್ನು ಬಳಸಬಹುದು. ಇನ್ನು ಪುಪ್ಪಾ ಮುಂಜಿಯಾಲ್ ಅವರ ಈ ಆಸ್ತಿಯು ಸ್ವಯಾರ್ಜಿತ ಆಸ್ತಿಯಾಗಿದ್ದು, ಅವರು ಯಾರಿಗೆ ಬೇಕಾದರೂ ಈ ಆಸ್ತಿಯ ಒಡೆತನವನ್ನು ನೀಡಬಹುದು ಎನ್ನಲಾಗಿದೆ. ಇನ್ನು ಪುಪ್ಪಾ ಮುಂಜಿಯಾಲ್ ಅವರ ಕೌಟುಂಬಿಕ ಹಿನ್ನೆಲೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Exit mobile version