ಮೇಯರ್ ಚುನಾವಣೆಗೆ ಗೈರು: ಜಿಟಿಡಿ, ಸಂದೇಶ್ ನಾಗರಾಜ್ ಅಮಾನತ್ತಿಗೆ ಆಗ್ರಹ

ಮೈಸೂರು, ಫೆ. 27: ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಬಳಿಕ ಕಾಂಗ್ರೆಸ್​ನಲ್ಲಿ ಉಂಟಾಗಿರುವ ಭಿನ್ನಮತ ಶಮನಕ್ಕೂ ಮುನ್ನವೇ ಇದೀಗ ಜೆಡಿಎಸ್​ ಪಾಳಯದಲ್ಲೂ ಅಸಮಾಧಾನ ಸ್ಪೋಟಗೊಂಡಿದೆ.

ಒಂದೆಡೆ ಕಾಂಗ್ರೆಸ್​ ಪಕ್ಷದಲ್ಲಿ ಜೆಡಿಎಸ್​ ಜೊತೆಗಿನ ಮೈತ್ರಿ ಬಗ್ಗೆ ಕೈ ನಾಯಕರಿಂದ ಭಿನ್ನರಾಗ ಕೇಳಿ ಬಂದಿದ್ದು, ಇದರ ನಡುವೆ ಜೆಡಿಎಸ್​ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯ ಜೆಡಿಎಸ್​ ಮುಖಂಡರು, ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಭಾಗಿಯಾಗದೇ ದೂರ ಉಳಿದ ಶಾಸಕ ಜಿ.ಟಿ.‌ದೇವೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರನ್ನು ಕೂಡಲೇ ಪಕ್ಷದಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜೆಡಿಎಸ್ ನಗರಾಧ್ಯಕ್ಷ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಇಬ್ಬರೂ ಕೂಡಾ ಉದ್ದೇಶಪೂರ್ವಕವಾಗಿ ದೂರ ಉಳಿದಿದ್ದಾರೆ. ಮನೆಯಲ್ಲಿಯೇ ಇದ್ದುಕೊಂಡು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಜಿ.ಟಿ. ದೇವೇಗೌಡರು ರಾಜೀನಾಮೆ ‌ನೀಡಬೇಕು, ಇಲ್ಲದಿದ್ದರೆ ಪಕ್ಷವೇ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ನಿರತರಾಗಿರುವ ಜಿ.ಟಿ.ದೇವೇಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷೇತರರಾಗಿ ಸ್ಪರ್ಧಿಸಿ ತಮ್ಮ ಶಕ್ತಿ ತೋರಿಸಲಿ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಜಿಟಿಡಿ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅವರನ್ನು ಪಕ್ಷದಲ್ಲೇ ಉಳಿಸಿಕೊಂಡರೆ ನಾವೆಲ್ಲರೂ ಜೆಡಿಎಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಸಿದರು.

Exit mobile version