ಹಾಜಬ್ಬನ ಶಾಲೆಯಲ್ಲಿ ತುಳಸಜ್ಜಿ

ಮಂಗಳೂರು ನ 13 : ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ, ಪದ್ಮಶ್ರೀ ಪುರಸ್ಕೃತ ಹಾಜಬ್ಬ ಅವರ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಬೆರೆತರು ಹಾಗೂ ಹಾಜಬ್ಬ ಮನೆಗೂ ತೆರಳಿ ಅವರ ಆತಿಥ್ಯವನ್ನು ಸ್ವೀಕರಿಸಿದರು.

ದೆಹಲಿಯಿಂದ ಬರುವಾಗಲೇ ತುಳಸಿ ಗೌಡ, ಹರೇಕಳ ಹಾಜಬ್ಬ ತೆರೆದಿರುವ ಶಾಲೆ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಹರೇಕಳ ಹಾಜಬ್ಬರ ಶಾಲೆ ಮತ್ತು ಮನೆಗೆ ತುಳಸಿಗೌಡ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ. ಪಿಯು ಕಾಲೇಜು ತೆರೆಯಲು ಹಾಜಬ್ಬರಿಗೆ ಆರ್ಥಿಕ ನೆರವು ನೀಡಿದ್ದಾರೆ. ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಆರ್ಥಿಕ ನೆರವು ನೀಡಿದ್ದಾರೆ. ಹರೇಕಳ ಹಾಜಬ್ಬರವರ ಸಾಹಸ ಕೊಂಡಾಡಿದ್ದಾರೆ.

ಅಕ್ಷರ ಸಂತ : ತನ್ನೂರಿನ ವಿದ್ಯಾರ್ಥಿಗಳಿಗಾಗಿ ಸ್ವಂತ ಶಾಲಾ ಕಟ್ಟಡ ಕಟ್ಟಬೇಕೆಂದು ಹಠ ತೊಟ್ಟ ಹಾಜಬ್ಬ ಕಿತ್ತಳೆ ಮಾರಿ ಅದುವರೆಗೂ ಸಂಗ್ರಹಿಸಿದ್ದ 25 ಸಾವಿರ ರೂ. ಹಿಡಿದುಕೊಂಡು ಗ್ರಾಮದಲ್ಲಿ ಬೇರೆಯವರು ಅತಿಕ್ರಮಣ ಮಾಡಿದ್ದ ಸರ್ಕಾರಿ ಜಾಗವನ್ನು ಶಾಲೆಗಾಗಿ ನೀಡುವಂತೆ ಅಧಿಕಾರಿಗಳ ಮುಂದೆ ಹಠ ಹಿಡಿದರು. ಬಳಿಕ 2004ರಲ್ಲಿ ಪತ್ರಿಕೆಯೊಂದು ನೀಡಿದ ವರ್ಷದ ವ್ಯಕ್ತಿಯ 1 ಲಕ್ಷ ರೂ. ಬಹುಮಾನದ ಮೊತ್ತವನ್ನು ಶಾಲೆಯ ಕಟ್ಟಡಕ್ಕೆ ಹಾಕಿ ಪ್ರೌಢಶಾಲೆಯನ್ನೂ ಆರಂಭಿಸಲು ಅಲೆದಾಡಿದರು. ಆಗ ಶಾಸಕರಾಗಿದ್ದ ಯು.ಟಿ. ಖಾದರ್‌ ಆ ಊರಿಗೆ ಪ್ರೌಢಶಾಲೆ ಮಂಜೂರು ಮಾಡಿಸಿದರು. ಹೀಗೆ ಹರೇಕಳದಲ್ಲಿ ಶಾಲೆಯೊಂದು ತಲೆ ಎತ್ತಿತು.

ವೃಕ್ಷ ಮಾತೆ : ತುಳಸಿ ಗೌಡ ಅರಣ್ಯ ಇಲಾಖೆಯಿಂದ ಬೀಜಗಳನ್ನು ಶೇಖರಣೆ ಮಾಡಿ, ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನು ಕೇವಲ 1.25 ಪೈಸೆ ದಿನದ ಕೂಲಿಯಲ್ಲಿ ಬಹಳ ಖುಷಿಯಿಂದ ಮಾಡುತ್ತಿದ್ದರು. ಎಲ್ಲರೂ ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಅಂದರೂ ಇವರ ಪರಿಸರ ಕಾಳಜಿಯಿಂದ ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ. ಇದರೊಂದಿಗೆ ತಾನು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಇವರು ಸುಮಾರು 30 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ಮಾಡುತ್ತಾ ಬಂದರು. ಈಕೆ ನೆಟ್ಟು ಪೋಷಿಸಿದ ಸಸಿಗಳು ಇಂದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ, ನೆರಳನ್ನು ನೀಡುತ್ತಿವೆ.

Exit mobile version