Bengaluru: ಜೂನ್ ತಿಂಗಳಲ್ಲಿ ತೆರೆಕಾಣಲಿರುವ ಹಿಂದಿ ಭಾಷೆಯ ‘ಹಮಾರೆ ಬಾರಾಹ್’ (Hamare Baarah) ಚಲನಚಿತ್ರದಲ್ಲಿ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಚಲನಚಿತ್ರ ದೇಶಾದ್ಯಂತ ವಿವಾದ ಸೃಷ್ಟಿಸಿರುವ ಸಮಯದಲ್ಲೇ ಕರ್ನಾಟಕ (Karnataka)ದಲ್ಲಿ ಈ ಚಿತ್ರವನ್ನು ನಿಷೇಧದ ಕುರಿತಾಗಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
![Karntaka](https://sp-ao.shortpixel.ai/client/to_webp,q_glossy,ret_img,w_275,h_184/https://vijayatimes.com/wp-content/uploads/2024/06/images-2.jpg)
ಇನ್ನು ಧರ್ಮದ ದಂಗಲ್ ಎಬ್ಬಿಸಿ ಜನರ ನೆಮ್ಮದಿ ಕೆಡಿಸುವ ಈ ವಿವಾದಿತ ಸಿನಿಮಾದ ಟ್ರೈಲರ್ ಅನ್ನು ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನೆಮಾ ಮಂದಿರ, ಖಾಸಗಿ ಟಿವಿ ಚಾನಲ್ ಸೇರಿದಂತೆ ಎಲ್ಲಿಯೂ ಕೂಡಾ ಪ್ರಸಾರ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ರಾಜ್ಯ ಸರಕಾರದ ಆದೇಶದಲ್ಲಿ ಉಲ್ಲೇಖಿಸಿದೆ .ಈ ಸಂಬಂಧ ರಾಜ್ಯ ಸರಕಾರದ ಆದೇಶವನ್ನು ಯಾರಾದರೂ ಉಲ್ಲಂಘಿಸಿದ್ದು ಕಂಡುಬಂದಲ್ಲಿ, ಕಾನೂನು ರೀತ್ಯಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ (Alok Mohan) ಎಚ್ಚರಿಕೆ ನೀಡಿದ್ದಾರೆ.
ಇನ್ನು ಬಿಡುಗಡೆಯಾಗಲಿರುವ ಹಮಾರೆ ಬಾರಾಹ್ ಚಿತ್ರವು ಅದರ ಟ್ರೇಲರ್ (Trailer) ಮತ್ತು ಟೀಸರ್ ಬಿಡುಗಡೆಯಾದಾಗಿನಿಂದ ವಿವಾದಗಳಿಂದ ಸುತ್ತುವರೆದಿದೆ. ಆ ನಂತರ ಚಿತ್ರದ ನಟರಿಗೆ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಬರುತ್ತಿವೆ. ವಾಸ್ತವವಾಗಿ, ಈ ಚಿತ್ರದಲ್ಲಿ ನಿರ್ದಿಷ್ಟ ಧರ್ಮದ ಜನರ ಕಥೆಯನ್ನು ತೋರಿಸಲಾಗಿದೆ. ಅವರ ಬದುಕು, ಜೀವನ ಶೈಲಿ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಮೊದಲು ಚಿತ್ರವನ್ನು ಜೂನ್ (June) 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಪ್ರಸ್ತುತ ಬಾಂಬೆ ಹೈಕೋರ್ಟ್ (Highcourt) ಕೂಡ ಜೂನ್ 14 ರವರೆಗೆ ಈ ಚಲನಚಿತ್ರ ಬಿಡುಗಡೆ ಮಾಡದಂತೆ ಆದೇಶ ಹೊರಡಿಸಿದೆ.