ಹನುಮ‌ ಜಯಂತಿ ಕುರಿತ ಸಿದ್ದರಾಮಯ್ಯ ಹೇಳಿಕೆ: ಮುಂದುವರಿದ ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ ಸಮರ

ಬೆಂಗಳೂರು, ಡಿ. 28: ಹನುಮ ಜಯಂತಿ ಕುರಿತು ಮಾಜಿ ಸಿಎಂ‌ ಸಿದ್ದರಾಮಯ್ಯ ಮಾಂಸಾಹಾರ ಸೇವನೆ ಮಾಡಿದ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ‌ನಾಯಕರ ನಡುವೆ ಉಂಟಾಗಿರುವ ವಾಕ್ ಸಮರ ‌ಮುಂದುವರಿದಿದೆ.

ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಹನುಮಂತ ಎಂಬುದು ಒಂದು ಬುಡಕಟ್ಟು ಜನರ ಶಕ್ತಿಯ ಮೂಲವೇ ಹೊರತು, ಮನುವಾದಿಗಳ ಜಾತಿ ಹಾಗೂ ಮೌಢ್ಯತೆಯ ಮೂಲವಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬುಡಕಟ್ಟು ಸಮುದಾಯದ ಆಂಜನೇಯ ಎಂದರೆ ಇಂದಿಗೂ ಸಹ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ದೈವ ಸಮಾನನಾದ ಆತ ವೈದಿಕರಿಗೆ ಮತ್ತು ಆರ್ಯರ ಸಂಕಷ್ಟಮಯ ಬದುಕಿಗೆ ಸಹಾಯ ಮಾಡಿಕೊಂಡು ಜೊತೆಗಿದ್ದ ಎಂದ ಮಾತ್ರಕ್ಕೆ ಆತನ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರ ಆಹಾರ ಕ್ರಮವನ್ನು ಮನುವಾದಿಗಳು ಅಲ್ಲಗಳೆಯುವುದು, ಅಣಕಿಸುವುದು ಕನಿಷ್ಠವೆನ್ನುವುದು ಎಷ್ಟು ಸರಿ?

ಬುಡಕಟ್ಟು ಸಮುದಾಯದ ಹನುಮ ದೇವರಿಗೆ ಮಾಂಸಾಹಾರವನ್ನೇ ಎಡೆಯಾಗಿ ಇಡುವ ನೂರಾರು ಬುಡಕಟ್ಟು ಸಮುದಾಯಗಳಿವೆ. ಹೀಗಿರುವಾಗ ಹನುಮ ಜಯಂತಿಯ ಹೆಸರಲ್ಲಿ ಬುಡಕಟ್ಟು ಜನರ ಆಹಾರ ಪದ್ದತಿಯನ್ನು ಅವಮಾನಿಸುವುದು ಹನುಮಂತನನ್ನೇ ಅವಮಾನಿಸಿದಂತೆ.‌ ಹನುಮಂತ ಎಂಬುದು ಒಂದು ಬುಡಕಟ್ಟು ಜನರ ಶಕ್ತಿಯ ಮೂಲವೇ ಹೊರತು, ಮನುವಾದಿಗಳ ಜಾತಿ ಹಾಗೂ ಮೌಢ್ಯತೆಯ ಮೂಲವಲ್ಲ‌ ಎಂದಿದ್ದಾರೆ. ‌

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಎಸ್.ಎ.‌ರಾಮದಾಸ್, ಹನುಮ ಜಯಂತಿಯನ್ನು ತಾರೀಖು ನೋಡಿ ಮಾಡುವುದಿಲ್ಲ. ಅದನ್ನು ತಿಥಿ ನಕ್ಷತ್ರದ ಪ್ರಕಾರ ಮಾಡಲಾಗುತ್ತದೆ. ಹನುಮನ ಜನ್ಮಸ್ಥಾನವಾದ ನಮ್ಮ ರಾಜ್ಯದಲ್ಲೇ ಹನುಮನ ಬಗ್ಗೆ ಅವಹೇಳನ ಸರಿಯೇ? ಎಂದು ಪ್ರಶ್ನಿಸಿರುವ ಅವರು, ಹನುಮಂತನಿಗೆ ಈ ರೀತಿಯಲ್ಲಿ ಅಗೌರವ ಸೂಚಿಸುವುದು ಸರಿ ಅಲ್ಲ. ಈ ನಿಮ್ಮ ನಡೆ ಸರಿಯೇ ಎಂದು ನಿಮ್ಮಲ್ಲೇ ಕೇಳಿಕೊಳ್ಳಿ.! ಎಂದು ಟ್ವೀಟ್ ಮೂಲಕ
ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version