ಸೌಜನ್ಯಾ ಅತ್ಯಾಚಾರ ಪ್ರಕರಣ: ಸಂತೋಷ್‌ ರಾವ್‌ಗೆ ನೊಟೀಸ್‌ ನೀಡಿದ ಹೈಕೋರ್ಟ್‌

Belthangadi: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸೌಜನ್ಯ ಅತ್ಯಾಚಾರ ಕೊಲೆ (Soujanya Murder Case) ಪ್ರಕರಣದ ಆರೋಪಿ ಸಂತೋಷ್‌ ರಾವ್‌ನನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಸಿಬಿಐ (CBI) ವಿಶೇಷ ನ್ಯಾಯಾಲಯವು 2023ರ ಜೂನ್‌ 16ರಂದು ಆರೋಪಿ ಸಂತೋಷ್‌ ರಾವ್‌ನನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದು, ಇದನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ವಿಜಯಕುಮಾರ್‌ ಎ.ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ಈ ಕುರಿತು ವಿಚಾರಣೆ ನಡೆಸುತ್ತಿದ್ದು, ಸಂತೋಷ್‌ ರಾವ್‌ಗೆ (Santhosh Rao) ನೊಟೀಸ್ ನೀಡಿದೆ.

ಏನಿದು ಪ್ರಕರಣ?
ಎಂದಿನಂತೆ ಕಾಲೇಜಿಗೆ ಹೋಗಿದ್ದ ಸೌಜನ್ಯ ಅಕ್ಟೋಬರ್ (October) 9, 2012ರಂದು ಸಂಜೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ನಾಪತ್ತೆಯಾಗಿದ್ದಳು, ಮರು ದಿನ ರಾತ್ರಿ ಮಣ್ಣ ಸಂಕ ಬಳಿಯಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಮೊದಲು ಸಿಐಡಿಗೆ ವಹಿಸಲಾಗಿತ್ತು. 2013ರ ನವೆಂಬರ್‌ (November) 6ರಂದು ಪ್ರಕರಣದ ಬಗ್ಗೆ ಸರ್ಕಾರವು ಸಿಬಿಐಗೆ ತನಿಖೆಗೆ ಆದೇಶಿಸಿತ್ತು.

ಉಡುಪಿ (Udupi) ಜಿಲ್ಲೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಸಂತೋಷ್ ರಾವ್‌ಗೆ ಬಾಹುಬಲಿ ಬೆಟ್ಟದ ಬಳಿಯಲ್ಲಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಕೃತ್ಯ ನಡೆದು 11 ವರ್ಷಗಳ ಬಳಿಕ ತೀರ್ಪು ಪ್ರಕಟಗೊಂಡಿತ್ತು. ಆರೋಪಿ ವಿರುದ್ಧ ಸಲ್ಲಿಕೆ ಮಾಡಲಾಗಿರುವ ಸಾಕ್ಷ್ಯಾಧಾರಗಳಲ್ಲಿ ಕೊರತೆ ಇದೆ ಎನ್ನುವ ಕಾರಣಕ್ಕೆ ಆರೋಪಿಯನ್ನು ದೋಷಮುಕ್ತ ಮಾಡಿರುವುದಾಗಿ ನ್ಯಾಯಮೂರ್ತಿ ಸಿಬಿ ಸಂತೋಷ್‌ (C.B Santhosh) ಹೇಳಿದ್ದರು.

ಸೌಜನ್ಯ ಪರ ಹೋರಾಟಗಳು ಭುಗಿಲೆದ್ದಿತ್ತು. ಕರಾವಳಿಯಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿತ್ತು ಸಂತೋಷ್ ರಾವ್ ನಿರಪರಾಧಿ ಎಂಬುದು ಮೊದಲೇ ಖಾತ್ರಿಯಾಗಿತ್ತು. ಆದರೆ, ನಿಜವಾದ ಅಪರಾಧಿಗಳು ಧರ್ಮಸ್ಥಳದಲ್ಲಿಯೇ ಇದ್ದಾರೆ, ಅವರನ್ನು ಬಂಧಿಸಬೇಕು ಎಂದು ಒತ್ತಾಯಗಳು ಕೇಳಿ ಬಂದಿದ್ದವು. ಈ ನಡುವೆ ಪ್ರಕರಣವನ್ನು ಮರು ತನಿಖೆ ನಡೆಸಲು ಸೂಚನೆ ನೀಡಬೇಕೆಂದು ಬೆಂಗಳೂರಿನ (Bengaluru) ಶೇಷಾದ್ರಿಪುರದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ (Girish Bharadwaj), ಬೆಳ್ತಂಗಡಿಯ ಜಿ ನವೀನ್ ಕುಮಾರ್ ಮತ್ತು ಪುತ್ತೂರಿನ ವಿನಾಯಕ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ಭವ್ಯಶ್ರೀ ಆರ್ ಜೆ

Exit mobile version