ಬಿಜೆಪಿ(BJP) ಬಣ್ಣಗೇಡು ವರಸೆಗೆ ಇದು ತಾಜಾ ಉದಾಹರಣೆ. ಹೇಳುವುದು ಒಂದು, ಮಾಡುವುದು ಇನ್ನೊಂದು.
ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರಕಾರ(BJP Govt) ಸೃಷ್ಟಿಸಿರುವ ಅರಾಜಕತೆ ಮಕ್ಕಳ ಕಲಿಕೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದೆ.
ಪಠ್ಯಕ್ಕೆ ಕೇಸರಿ ಬಳಿದು ಕತ್ತರಿ ಹಾಕುವ ಅಕ್ಷರದ್ರೋಹಿ ಬಿಜೆಪಿ ಸರಕಾರಕ್ಕೆ ಬಣ್ಣಗೆಟ್ಟ ಶಾಲೆಗಳ ಗೋಡೆಗಳೇ ಕಾಣುತ್ತಿಲ್ಲ ಎಂದು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ(HDK Statement over BJP Govt) ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ತಕ್ಷಣವೇ ಸರಕಾರ ಕ್ರಮ ವಹಿಸಬೇಕು. ಅಧಿಕಾರಿಗಳನ್ನು ಶಾಲೆಗಳಿಗೆ ಅಟ್ಟಿ ರಿಪೇರಿ ಕೆಲಸ ಮಾಡಿಸಿ ಎಲ್ಲ ಮೂಲಸೌಕರ್ಯ ಒದಗಿಸಬೇಕು. ಒಂದು ಮಗುವಿಗೆ ಅಪಾಯವಾದರೂ ಸುಮ್ಮನಿರುವ ಪ್ರಶ್ನೆ ಇಲ್ಲ.
ಒಂದು ತಿಂಗಳೊಳಗೆ ಶಾಲೆಗಳು ಸರಿ ಆಗದಿದ್ದರೆ, ಸದನದ ಒಳಗೆ, ಹೊರಗೆ ಶಿಕ್ಷಣ ಸಚಿವರು ಹೋರಾಟ ಎದುರಿಸಬೇಕಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಮೀರಿದೆ. ಬೊಗಳೆ ಬಿಟ್ಟಿದ್ದು, ಸಮಾಜ ಒಡೆದಿದ್ದು ಬಿಟ್ಟರೆ ಮಾಡಿದ್ದೇನು? ರಾಷ್ಟ್ರೀಯ ಶಿಕ್ಷಣ ನೀತಿ ಎನ್ನುತ್ತೀರಿ, ಪಠ್ಯ ಪರಿಷ್ಕರಣೆ ಮಾಡಿದ್ದೀರಿ.
ಮಾನ್ಯ ಶಿಕ್ಷಣ ಸಚಿವ(Education Minister) ಬಿ.ಸಿ.ನಾಗೇಶ್(BC Nagesh) ಅವರೇ, ಪಠ್ಯಕ್ಕೆ `ಆಪರೇಷನ್ ಕಮಲʼದ ಒಂದು ಅಧ್ಯಾಯವನ್ನೂ ಸೇರಿಸಬೇಕಿತ್ತು, ಭವ್ಯಭಾರತವನ್ನು ಬೆಳಗಲು ಎಂದು ಲೇವಡಿ ಮಾಡಿದ್ದಾರೆ. ಶಾಲೆಗಳ ಸುಸ್ಥಿತಿ, ಮಕ್ಕಳ ಸುರಕ್ಷತೆ ಬಗ್ಗೆ ಸುಮ್ಮನಿದ್ದೀರಿ.
ಪಠ್ಯದ ಕತ್ತರಿಗೆ ಇರುವಷ್ಟು ಆತುರ, ಶಾಲೆ ಕೊಠಡಿಗಳ ರಿಪೇರಿಗೆ ಯಾಕಿಲ್ಲ? ಇಲ್ಲಿ 40% ಕಮೀಷನ್ ವ್ಯವಹಾರ ಕುದುರಲಿಲ್ಲವೇ? ಭಾರತವನ್ನು ವಿಶ್ವಗುರು ಮಾಡುವುದು ಎಂದರೆ ಹೀಗೇನಾ? ಹೇಳಿ ಮಾನ್ಯ ಶಿಕ್ಷಣ ಸಚಿವರೇ? ದುಬಾರಿ ಶುಲ್ಕ ತೆತ್ತು ಖಾಸಗಿ ಶಾಲೆಗಳಿಗೆ ಸೇರಲಾಗದ ಬಡ, ಮಧ್ಯಮವರ್ಗದ ಮಕ್ಕಳು ಸರಕಾರಿ ಶಾಲೆಗಳಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ.

ಈ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ? ಹೇಳಿ ಶಿಕ್ಷಣ ಸಚಿವರೇ? ಎಂದು ಪ್ರಶ್ನಿಸಿದ್ದಾರೆ. 224 ವಿಧಾನಸಭೆ ಕ್ಷೇತ್ರಗಳ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಲಕ್ಷಾಂತರ ಮಕ್ಕಳು ಜೀವ ಅಂಗೈಯಲ್ಲಿಟ್ಟುಕೊಂಡು ಕಲಿಯುತ್ತಿದ್ದಾರೆ. ಅವರಿಗೆ ಶಾಲೆಯೇ ಶಿಕ್ಷೆಯಾಗಿದೆ. ಶಿಕ್ಷಣ ಇಲಾಖೆ ಅದಕ್ಷತೆಯ ಕೂಪ ಎನ್ನುವುದಕ್ಕೆ ಇದೇ ಸಾಕ್ಷಿ. ಶಿಕ್ಷಣ ಸಚಿವರು, ಆ ಇಲಾಖೆಯ ಅಧಿಕಾರಿಗಳ ಪರಮ ಬೇಜವಾಬ್ದಾರಿಯ ಪರಾಕಾಷ್ಠೆ ಇದು. ಅನೇಕ ಪತ್ರಿಕೆಗಳು ಬಿಜೆಪಿ ಸರಕಾರದ ಗೋಮುಖವ್ಯಾಘ್ರ ಮುಖವನ್ನು ಬೆತ್ತಲುಗೊಳಿಸಿವೆ.