ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ: ಕಾಂಗ್ರೆಸ್ಗೆ ಎಚ್ಡಿಕೆ ಟಾಂಗ್

ಯುಗಾದಿ (Ugadi) ಹಿಂದೂಗಳ ಹೊಸವರ್ಷ. ಯುಗಾದಿ ಹಿಂದೂಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಮಿತೆ. ಈ ಹಬ್ಬದ ಮರುದಿನದ ಸಂಭ್ರಮ ಹೊಸತೊಡಕು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕಾಂಗ್ರೆಸ್ ಪಕ್ಷ ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚರಣೆಯ ಮೇಲೆಯೂ ‘ಕಾಕದೃಷ್ಟಿ’ ಬೀರಿದೆ. ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ (H.D Kumaraswamy) ಅವರು ಕಾಂಗ್ರೆಸ್ಗೆ ಟಾಂಗ್ ನೀಡಿದ್ದಾರೆ.

ತಮ್ಮ ಬಿಡದಿ ತೋಟದ ಮನೆಯಲ್ಲಿ ಆಯೋಜಿಸಿದ್ದ ಬಾಡೂಟವನ್ನು ಟೀಕಿಸಿದ್ದ ಕಾಂಗ್ರೆಸ್ (Congress) ವಿರುದ್ದ ಕಿಡಿಕಾರಿರುವ ಅವರು, ಪ್ರತೀ ಹಿಂದೂ ಮನೆಯಲ್ಲಿ ನಡೆಯುವಂತೆ ನಮ್ಮ ಮನೆಯಲ್ಲಿಯೂ ಹೊಸತೊಡಕು ಆಚರಣೆ ನಡೆಯುತ್ತಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಹೊಸತೊಡಕು ಊಟಕ್ಕೆ ಸಂಬಂಧಿಕರು, ಸ್ನೇಹಿತರು ಹಾಗೂ ರಾಜಕೀಯ ಸಹಪಾಠಿಗಳನ್ನು ಅವರು ಆಹ್ವಾನಿಸಿದ್ದಾರೆ. ಮಾಂಸದ ಅಡುಗೆ ಈ ದಿನದ ಸಾಮಾನ್ಯ ತಿನಿಸು. ಈ ಊಟಕ್ಕೂ ಕಾಂಗ್ರೆಸ್ ಕಲ್ಲು ಹಾಕಿ ವಿಕೃತಿ ಮೆರೆದಿದೆ.

ಮತಕ್ಕಾಗಿ ಹಣ, ಹೆಂಡ, ಸೀರೆ, ಕುಕ್ಕರ್, ಪ್ರಿಜ್ಡ್, ಕೂಪನ್ (Money, Saree, Cooker, Fridge, Coupon) ಹಂಚುವ ಸತ್ಸಂಪ್ರದಾಯ ರೂಢಿಸಿಕೊಂಡಿರುವ ಕಾಂಗ್ರೆಸ್, ಕಾವೇರಿ ಅಮ್ಮನ ಹೆಸರಿನಲ್ಲಿ ನಡೆಸಿದ ಮೇಕೆದಾಟು (Mekedatu) ಪಾದಯಾತ್ರೆಯಲ್ಲಿ ನದಿಯಂತೆ ಹರಿಸಿದ ಮಾಂಸ, ಮದ್ಯದ ಹೊಳೆಯನ್ನು ಕಾಣದವರು ಯಾರೂ ಇಲ್ಲ. ಆದರೆ, ಆ ಪಕ್ಷದ ಕಾಮಾಲೆ ಕಣ್ಣು ಹಿಂದೂಗಳ ಹಬ್ಬಗಳ ಮೇಲೆಯೇ ಬಿದ್ದಿದೆ. ಜಾತಿ, ಧರ್ಮಗಳ ತುಷ್ಟೀಕರಣ ಜಾಡ್ಯ ಕಾಂಗ್ರೆಸ್ ಪಕ್ಷವನ್ನು ಅಂಟಿಕೊಂಡಿದೆ ಎಂದು ಟೀಕಿಸಿದ್ಧಾರೆ.

ಕಾಂಗ್ರೆಸ್ ಸೋಲಿನ ಹತಾಶೆಯಿಂದ ಜೆಡಿಎಸ್ ಹಾಗೂ ಬಿಜೆಪಿ (JDS, BJP) ಪಕ್ಷಗಳನ್ನು ಟೀಕಿಸುವ ಬರದಲ್ಲಿ ನಮ್ಮ ಹಿಂದೂ ಸಂಪ್ರದಾಯದ ಬಗ್ಗೆ ಅವಹೇಳನ ಮಾಡಿದೆ. ಅದರ ಕೊಳಕುತನ ಅದರ ಟ್ವೀಟ್ ನಲ್ಲಿ ಎದ್ದು ಕಾಣುತ್ತಿದೆ. ನಿರಂತರವಾಗಿ ಹಿಂದೂ ವಿರೋಧಿ, ದ್ರೋಹಿ ಆಗಿರುವ ಕಾಂಗ್ರೆಸ್ ಗೆ ಹೊಸತೊಡಕುಗಿಂತ ಇಫ್ತಾರ್ (Ifthar) ಕೂಟದಲ್ಲಿಯೇ ಹೆಚ್ಚು ಪ್ರೀತಿ. ಜನ್ಮದಾರಭ್ಯ ಬಂದಿದ್ದನ್ನು ನಾವಂತೂ ಅವಹೇಳನ ಮಾಡುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಇದಕ್ಕೂ ಮುನ್ನ ತೋಟದ ಮನೆಯಲ್ಲಿರುವ 100 ಜನ ಕಾರ್ಮಿಕರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದೆ ಎನ್ನುವ ಕುಮಾರಸ್ವಾಮಿಯವರೇ, 100 ಮಂದಿ ಕೆಲಸ ಮಾಡುವಷ್ಟು ಯಾವ ಫ್ಯಾಕ್ಟರಿ ನಡೆಸಿದ್ದೀರಿ ಸ್ವಾಮಿ? ಆ ನೂರು ಜನ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದೀರಾ? ESI ವ್ಯವಸ್ಥೆ ಮಾಡಿಸಿದ್ದೀರಾ? PF ಮಾಡಿಸಿದ್ದೀರಾ? ಒಂದು ತೋಟದ ಮನೆಯಲ್ಲಿ ನೂರು ಮಂದಿ ಕೆಲಸ ಮಾಡುತ್ತಾರೆಂದರೆ, ನಿಮ್ಮ ಇನ್ನುಳಿದ ಮನೆಗಳಲ್ಲಿ ಇನ್ನೆಷ್ಟು ಜನ ಕೆಲಸ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿತ್ತು.

Exit mobile version