`ಹೀರೋ’ ಟ್ರೇಲರ್ ಬಿಡುಗಡೆ

ಲಾಕ್ಡೌನ್ ಸಮಯದಲ್ಲಿ ಸೀಮಿತ ಅವಕಾಶಗಳನ್ನು ಬಳಸಿಕೊಂಡು ಮಾಡಿರುವ ಚಿತ್ರ ಹೀರೋ. ಆದರೆ ಸಿನಿಮಾದ ಟ್ರೇಲರ್ ನೋಡಿದ ಯಾರಿಗೂ ಅಂಥದೊಂದು ಭಾವವನ್ನು ಸೃಷ್ಟಿ ಮಾಡದಿರುವುದು ಮೇಕಿಂಗ್ ವಿಶೇಷ. ಅದು ಬಿಡುಗಡೆಗೂ ಮೊದಲೇ ಟ್ರೇಲರ್ ವೀಕ್ಷಿಸಿದ ಮಾಧ್ಯಮದವರ ಅನುಭವ. ಇಂದು ಯೂಟ್ಯೂಬ್‌ನಲ್ಲಿ ತೆರೆಕಾಣಲಿರುವ ಹೀರೋ ಟ್ರೇಲರ್ ಎಲ್ಲ ವೀಕ್ಷಕರಿಂದಲೂ ಅದ ಅಭಿಪ್ರಾಯ ಪಡೆಯುವುದು ಖಚಿತ.

ಕೇವಲ 24 ಜನರ ತಂಡವನ್ನು ಕಟ್ಟಿಕೊಂಡು ಒಂದು ದಿನದಲ್ಲಿ ನಡೆಯುವ ಕತೆಯೊಂದನ್ನು ಚಿತ್ರವಾಗಿಸುವಲ್ಲಿ ನಿರ್ಮಾಪಕ, ನಾಯಕರಾಗಿದ್ದಾರೆ ರಿಷಬ್ ಶೆಟ್ಟಿ. ಚಿತ್ರದ ನಿರ್ದೇಶನವನ್ನು ನವ ನಿರ್ದೇಶಕ ಎಮ್. ಭರತ್ ರಾಜ್ ವಹಿಸಿಕೊಂಡಿದ್ದಾರೆ. ಸಿನಿಮಾ ಸೆಟ್ ಎಂದರೇನೇ ನೂರಿನ್ನೂರು ಮಂದಿ ಇರಲೇಬೇಕು ಎನ್ನುವ ಸಂದರ್ಭದಲ್ಲಿ ಮೊದಲ ಚಿತ್ರದಲ್ಲೇ ಕಡಿಮೆ ಮಂದಿಯನ್ನು ಇರಿಸಿಕೊಂಡು ಚಿತ್ರ ಮಾಡಬೇಕಾಗಿತ್ತು. ಹಾಗಾಗಿಯೇ ಚಿತ್ರದಲ್ಲಿ ಪ್ರೊಡಕ್ಷನ್ ಇನ್ ಚಾರ್ಜ್ ಸೇರಿದಂತೆ ಬಹಳ ಮಂದಿಯನ್ನು ಕಲಾವಿದರಾಗಿ ಬಳಸಿಕೊಳ್ಳುವ ಚಾಲೆಂಜ್ ಭರತ್ ಎದುರಿಸಿದ್ದಾರೆ. ಅವರು ಈ ಹಿಂದೆ `ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ರಿಷಬ್ ಅವರಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು.

“ಈ ರೀತಿ ತೀರ ಸರಳವಾಗಿ ಒಂದು ಕಮರ್ಷಿಯಲ್ ಸಿನಿಮಾ ಮಾಡಿರುವುದು ನಮಗೆ ತುಂಬ ಹೊಸ ಅನುಭವ. ಹಾಗಂತ ಚಿತ್ರಕ್ಕೆ ಪರದೆಯ ಮೇಲೆ ಮಾತ್ರವಲ್ಲ, ಶ್ರಮದ ಮೂಲಕ ಚಿತ್ರೀಕರಣದಲ್ಲಿಯೂ ರಕ್ತ ಬಸಿದು ಕೆಲಸ ಮಾಡಿದ ಸಂದರ್ಭ ಇದೆ. ಸಾಹಸ ನಿರ್ದೇಶಕ ವಿಕ್ರಂ ಮೋರ್ ಅವರೊಂದಿಗೆ ನಾನು ಕೂಡ ಆಕ್ಷನ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದೇನೆ. ನಮ್ಮ ಪರಿಶ್ರಮದ ಪ್ರತಿಫಲ ಪರದೆಯ ಮೇಲೆ ಸುಂದರವಾಗಿ ಕಾಣಬಹುದೆನ್ನುವ ನಂಬಿಕೆ ಇದೆ. ಎಂದಿನಂತೆ ಅಜನೀಶ್ ಅವರ ಸಂಗೀತ ಆಕರ್ಷಕ” ಎಂದರು ನಾಯಕ, ನಿರ್ಮಾಪಕ ರಿಷಬ್. ಮಗಳು ಜಾನಕಿ’ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡಿದ ಗಾನವಿ ಲಕ್ಷ್ಮಣ್ ಅವರಿಗೆ ಇದು ಪ್ರಥಮ ಸಿನಿಮಾ. “ನನ್ನ ತಂದೆ ರೈತರು. ಚಿಕ್ಕ ಮಗಳೂರಲ್ಲಿ ನಮಗೆ ಎಸ್ಟೇಟ್ ಇದೆ. ಹಾಗಾಗಿ ಎಸ್ಟೇಟ್ನಲ್ಲಿ ಜೀಪ್ ಓಡ್ಸೋದು, ಓಡಾಡೋದಿ ನನಗೆ ಇಷ್ಟವಾದ ಹವ್ಯಾಸ. ಹಾಗಾಗಿ ಚಿತ್ರೀಕರಣದ ವಾತಾವರಣ ನನಗೆ ಹೊಸದಾಗಿ ಅನಿಸಲಿಲ್ಲ. ಇಂಥದೊಂದು ಅವಕಾಶ ನೀಡಿದ್ದಕ್ಕೆ ರಿಷಬ್ ತಂಡದವರಿಗೆ ವಂದನೆಗಳು” ಎಂದರು ಗಾನವಿ. ಚಿತ್ರದಲ್ಲಿ ತಾನು ಖಳನೋ, ಉತ್ತಮನೋ ಎನ್ನುವುದನ್ನು ಥಿಯೇಟರಲ್ಲೇ ನೋಡಬೇಕು ಎಂದರುಉಗ್ರಂ’ ಖ್ಯಾತಿಯ ಮಂಜುನಾಥ ಗೌಡ.

ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕೆ ಪ್ರಮುಖ ಆಕರ್ಷಣೆ ಮೂಡಿಸಿದೆ. ಅರವಿಂದ್ ಮತ್ತು ವಸ್ತ್ರ ವಿನ್ಯಾಸಕಿ ಪ್ರಗತಿಯವರನ್ನು ಹೊರತುಪಡಿಸಿ ಚಿತ್ರದ ಪ್ರತಿಯೊಬ್ಬರು ಕೂಡ ಚಿತ್ರದಲ್ಲಿ ಒಂದಲ್ಲ ಒಂದು ಪಾತ್ರವನ್ನು ನಿಭಾಯಿಸಿರುವುದು ವಿಶೇಷ. ಅದರಲ್ಲಿ ಗಿಂಬಲ್ ಆಪರೇಟರ್ ಜಯಸಿಂಹ ಸೇರಿದಂತೆ ಮೇಕಪ್ ಆರ್ಟಿಸ್ಟ್ , ಕಲಾನಿರ್ದೇಶಕ ಹೀಗೆ ಪ್ರತಿಯೊಬ್ಬರು ಭಾಗಿಗಳು. ಮುಖ್ಯ ಖಳನಾಗಿ ನಟಿಸಿರುವ ಪ್ರಮೋದ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸುದ್ದಿಗೋಷ್ಠಿಯನ್ನು ನಿರೂಪಿಸಿದರು.

Exit mobile version