ಎಸ್ಎಸ್ಎಲ್ಸಿ(SSLC) ಪರೀಕ್ಷೆ(Exams) ಸೋಮವಾರ(Monday) ೨೮ ರಿಂದ ಪ್ರಾರಂಭವಾಗಲಿವೆ. ಈಗಾಗಲೇ ಹಿಜಾಬ್(Hijab) ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಇನ್ನೊಂದೆಡೆ ಸುಪ್ರೀಂಕೋರ್ಟ್(Supremecourt) ಹಿಜಾಬ್(Hijab) ಪ್ರಕರಣಕ್ಕೂ, ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ ಎಂದು ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಈ ಎಲ್ಲ ಕಾರಣಗಳಿಂದ ಅಸಮಾಧಾನಗೊಂಡಿರುವ ಹಿಜಾಬ್ ಹೋರಾಟಗಾರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ತೆರೆಮರೆಯಲ್ಲಿ ಸಿದ್ದತೆ ನಡೆಸಿದ್ದಾರೆ. ಈಗಾಗಲೇ ಉಡುಪಿಯ ೬ ವಿದ್ಯಾರ್ಥಿನಿಯರು ಬೆಂಗಳೂರಿಗೆ ಆಗಮಿಸಿದ್ದು, ಅನೇಕ ಸಭೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ಅಜ್ಞಾತ ಸ್ಥಳದಲ್ಲಿ ಕೆಲ ಮುಸ್ಲಿಂ ನಾಯಕರು ವಿದ್ಯಾರ್ಥಿನಿಯರೊಂದಿಗೆ ಸಭೆ ನಡೆಸಿದ್ದಾರೆ. ಆದರೆ ಸಭೆಯ ವಿವರಗಳು ಬಹಿರಂಗವಾಗಿಲ್ಲ. ಆದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಲಾಗಿದೆ. ಅದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ರಾಜ್ಯದ ಎಲ್ಲೆಡೆಯಿಂದ ವಿದ್ಯಾರ್ಥಿನಿಯರನ್ನು ಕರೆತಂದು ಸೇರಿಸುವ ಸಿದ್ದತೆಯೂ ನಡೆದಿದೆ.
ಇನ್ನು ಈ ಬಗ್ಗೆ ಬೆಂಗಳೂರು ಪೋಲಿಸರು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಹಿಜಾಬ್ ಪರವಾಗಿ ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಕೋರಿ ಕೆಲ ಮುಸ್ಲಿಂ ಮಹಿಳಾ ಸಂಘಟನೆಗಳು ಬೆಂಗಳೂರು ಪೋಲಿಸರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರತಿಭಟನೆ ಮಾಡಲು ಪೋಲಿಸರು ಅನುಮತಿ ನೀಡಿಲ್ಲ. ಪ್ರತಿಭಟನೆ ನಡೆಸುವ ದಿನಾಂಕಕ್ಕಿಂತ ೫ ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಆದರೆ ಅವರು ಎರಡು ದಿನಗಳಿರುವಾಗ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಪ್ರತಿಭಟನೆಗೆ ಅವಕಾಶವನ್ನು ನಾವು ನೀಡಿಲ್ಲ.
ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸ್ ಇಲಾಖೆ ಖಡಕ್ ಎಚ್ಚರಿಕೆ ಕೊಟ್ಟಿದೆ. ಇನ್ನು ಪ್ರತಿಭಟನೆ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರ ರೂಪಿಸಲು ಕೆಲ ಮುಸ್ಲಿಂ ನಾಯಕರು ನಿರ್ಧರಿಸಿದ್ದಾರೆ. ಸುಪ್ರೀಂಕೋರ್ಟ್ ಕೂಡಾ ವಿಚಾರಣೆ ನಡೆಸಲು ದಿನಾಂಕ ಕೊಡುತ್ತಿಲ್ಲ. ಹೀಗಾಗಿ ಹಿಜಾಬ್ ವಿವಾದವನ್ನು ಎಲ್ಲೆಡೆ ಹಬ್ಬುವಂತೆ ಮಾಡುವ ಮೂಲಕ ಮುಸ್ಲಿಂ ಸಮುದಾಯವನ್ನು ಒಗ್ಗೂಡಿಸಲು ನಿರ್ಧರಿಲಾಗಿದೆ ಎನ್ನಲಾಗಿದೆ.